ಡಿ. 29 ಮತ್ತು30 ರಂದು ಶೃಂಗೇರಿ ಜಗದ್ಗುರುಗಳ ಮಂಗಳೂರು ಭೇಟಿ ಗುರುವಂದನೆ ಮತ್ತು ಗಾಯತ್ರಿ ಮಹಾಯಾಗ ಕಾರ್ಯಕ್ರಮದಲ್ಲಿ ಉಪಸ್ಥಿತಿ

0
103

ವರದಿ:- ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

ತುಳುನಾಡು : ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಕರಕಮಲ ಸಂಜಾತರಾದ ಜಗದ್ಗುರು
ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಾ॥ 29-12-2025ನೇ ಸೋಮವಾರದಂದು ಮಂಗಳೂರಿನ ಶರವು ದೇವಸ್ಥಾನದ ಬಳಿಯಿರುವ ಶ್ರೀ ರಾಧಾಕೃಷ್ಣ ದೇವಸ್ಥಾನಕ್ಕೆ (ಬಾಲಂಭಟ್ ಹಾಲ್) ಚಿತ್ತೈಸಲಿದ್ದಾರೆ .
ದಿನಾಂಕ 29ರಂದು ಸಂಜೆ 5.30 ರಿಂದ ಬಾಲಂಭಟ್ ಸಭಾಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿರುವುದು. ಜಗದ್ಗುರುಗಳಿಗೆ ಪೂರ್ಣಕುಂಭ ಸ್ವಾಗತ, ಧೂಳೀ ಪಾದಪೂಜೆ, ಫಲ ಸಮರ್ಪಣೆ, ನಂತರ ಸಮಾಜದ ಧಾರ್ಮಿಕ ಸಂಸ್ಥೆಗಳಿಗೆ ಧನ ಸಹಾಯದೊಂದಿಗೆ ಗೌರವಾರ್ಪಣೆ, ಬಳಿಕ ಜಗದ್ಗುರುಗಳಿಂದ ಆಶೀರ್ವಚನ ಕಾರ್ಯಕ್ರಮವಿದೆ.
ರಾತ್ರಿ 8.30 ರಿಂದ ಜಗದ್ಗುರುಗಳಿಂದ ಚಂದ್ರಮೌಳೀಶ್ವರ ಪೂಜೆ, ಫಲ ಮಂತ್ರಾಕ್ಷತೆ, ಭೋಜನ ಪ್ರಸಾದ ವ್ಯವಸ್ಥೆ ಇದ್ದು ಜಗದ್ಗುರುಗಳ ಪಾದಪೂಜೆ ಮಾಡುವವರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.

ಕರಾಡ ಬ್ರಾಹ್ಮಣ ಸಮಾಜ (ರಿ.) ಶಕ್ತಿನಗರ, ಮಂಗಳೂರು ಇದರ ರಜತ ಮಹೋತ್ಸವದ ಅಂಗವಾಗಿ ದಿನಾಂಕ 30-12-2025ನೇ ಮಂಗಳವಾರ ಬೆಳಗ್ಗೆ 5.30ರಿಂದ “ಗಾಯತ್ರಿ ಮಹಾಯಾಗ” ನೆರವೇರಲಿದ್ದು,
ಪೂರ್ವಾಹ್ನ 11.00ಕ್ಕೆ ಗಾಯತ್ರೀ ಯಾಗದ ಪೂರ್ಣಹುತಿ, ಮಹಾಪೂಜೆ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪತ್ರಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಭಗವದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಿ, ಗಾಯತ್ರಿ ದೇವಿಯ ಹಾಗೂ ಜಗದ್ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here