ಉಡುಪಿ: ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಆಶ್ರಯದಲ್ಲಿ 3 ದಿನ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಕಿರಿಯರ ಮತ್ತು 23ರ ವಯೋಮಿತಿ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್ಶಿಪ್ ಪಡೆದುಕೊಂಡಿದೆ.
14ರ ವಯೋಮಿತಿ ವಿಭಾಗದಲ್ಲಿ ದ.ಕ. ತಂಡ ಪ್ರಥಮ, ಶಿವಮೊಗ್ಗ ತಂಡ ದ್ವೀತಿಯ, 16ರ ವಯೋಮಿತಿಯಲ್ಲಿ ದ.ಕ. ತಂಡ ಪ್ರಥಮ, ಬೆಂಗಳೂರು ತಂಡ ದ್ವೀತಿಯ, 18ರ ವಯೋಮಿತಿಯಲ್ಲಿ ದ.ಕ. ಪ್ರಥಮ, ಉಡುಪಿ ದ್ವೀತಿಯ, 20ರ ವಯೋಮಿತಿಯಲ್ಲಿ ದ.ಕ. ಪ್ರಥಮ, ಬೆಂಗಳೂರು ದ್ವೀತಿಯ, 23ರ ವಯೋಮಿತಿಯಲ್ಲಿ ಬೆಂಗಳೂರು ಪ್ರಥಮ, ದ.ಕ. ದ್ವೀತಿಯ ಸ್ಥಾನ ಗಳಿಸಿದೆ.
ವೈಯಕ್ತಿಕ ವಿಭಾಗ
14ರ ವಯೋಮಿತಿ ಹುಡುಗರ ವೈಯಕ್ತಿಕ ವಿಭಾಗದಲ್ಲಿ ಮೈಸೂರಿನ ಆದರ್ಶ, 16ರ ವಯೋಮಿತಿಯಲ್ಲಿ ಶಿವಮೊಗ್ಗದ ಶರತ್ ಕೆ.ಜಿ., 18ರ ವಯೋಮಿತಿಯಲ್ಲಿ ಚಿರಂತ್ ಮೈಸೂರು, 20ರ ವಯೋಮಿತಿಯಲ್ಲಿ ನಿತಿನ್ ಗೌಡ, 23ರ ವಯೋಮಿತಿಯಲ್ಲಿ ಪ್ರಸನ್ನ ಕುಮಾರ್ ಬೆಸ್ಟ್ ಅಥ್ಲೆಟಿಕ್ ಪ್ರಶಸ್ತಿ ಗಳಿಸಿದ್ದಾರೆ.
ಹುಡುಗಿಯರ ವಿಭಾಗದಲ್ಲಿ 14ರ ವಯೋಮಿತಿಯಲ್ಲಿ ಅದ್ರಿಕಾ ಕೆ.ಪಿ., 16ರ ವಯೋಮಿತಿಯಲ್ಲಿ ಶಮಂತ್ ಮಿಕಾ, 18ರ ವಯೋಮಿತಿಯಲ್ಲಿ ಸುಚಿತ್ರಾ ಎಸ್., 20ರ ವಯೋಮಿತಿಯಲ್ಲಿ ಸ್ತುತಿ ಶೆಟ್ಟಿ, 23ರ ವಯೋಮಿತಿಯಲ್ಲಿ ಸಿಂಚನಾ ಎಂ.ಎಸ್. ಬೆಸ್ಟ್ ಅಥ್ಲೆಟಿಕ್ ಪ್ರಶಸ್ತಿ ಗಳಿಸಿದ್ದಾರೆ. ಪಂದ್ಯಾಟದಲ್ಲಿ ಗೆಲುವು ಸಾಧಿಸಿದವರು ಪುದುಚೇರಿಯಲ್ಲಿ ನಡೆಯುವ ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾಕೂಟ ಮತ್ತು ಭುವನೇಶ್ವರ್ ನಡೆಯುವ ರಾಷ್ಟ್ರೀಯ ಕಿರಿಯರ ಕ್ರೀಡಾಕೂಟಕ್ಕೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಬಹುಮಾನ ವಿತರಣೆ
ಸೋಮವಾರ ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಶಾಸಕ ಹಾಗೂ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್, ರಾಜ್ಯ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ರಾಜುವೇಲು, ರಾಜ್ಯ ಉಪಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಕೆನರಾ ಬ್ಯಾಂಕ್ ಜಿಎಂ ಎಚ್.ಕೆ. ಗಂಗಾಧರ್, ಎಜಿಎಂ ಸಂಜೀವ್ ಕುಮಾರ್, ಸೀನಿಯರ್ ಮ್ಯಾನೇಜರ್ ಮೇಘಾ ಶೆಟ್ಟಿ, ಮಾಜಿ ರೋಟರಿ ಗವರ್ನರ್ ಸಿಎ ದೇವಾನಂದ್, ಎಂಜೆಸಿ ಕಾಲೇಜು ಪ್ರಾಂಶುಪಾಲೆ ರೂಪಾ ಭಟ್, ಕೊಚ್ಚಿನ್ ಶಿಪ್ಯಾರ್ಡ್ ಸಿಎ್ಒ ಶಂಕರ್ ನಟರಾಜ್, ಡಾ. ಎಂ.ಆರ್.ಕುಮಾರ್, ಹರೀಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಪಾಟ್ಕರ್ ವಂದಿಸಿದರು.

