ಬೆಂಗಳೂರು: ಬೆಂಗಳೂರಿನ ಶ್ರೀರಾಮಪುರ ರೈಲ್ವೆ ಟ್ರ್ಯಾಕ್ ಬಳಿ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕತ್ತು ಕೊಯ್ದು ಕೊಲೆಗೈದಿದ್ದು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಮೃತ ವಿದ್ಯಾರ್ಥಿನಿಯ ತಂದೆ ಮಾಹಿತಿ ನೀಡಿದ್ದಾರೆ. ಆರು ತಿಂಗಳ ಹಿಂದೆ ಆರೋಪಿತ ಹುಡುಗ ಮತ್ತು ತಮ್ಮ ಮಗಳ ನಡುವೆ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆದಿತ್ತು. ಈ ವೇಳೆ ಎರಡೂ ಕಡೆಯಿಂದ ಮುಚ್ಚಳಿಕೆ ಬರೆಯಿಸಿಕೊಂಡು ಸಹಿ ಮಾಡಿಸಲಾಗಿತ್ತು ಎಂದು ಹುಡುಗಿಯ ತಂದೆ ತಿಳಿಸಿದ್ದಾರೆ. ಆ ಘಟನೆಯ ನಂತರ ಆರೋಪಿಯು ತನ್ನ ಮಗಳ ತಂಟೆಗೆ ಬಂದಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಕಳೆದ ಒಂದು ತಿಂಗಳಿನಿಂದ ಆರೋಪಿಯು ಮಗಳಿಗೆ ಕಿರುಕುಳ ನೀಡುತ್ತಿದ್ದನು, ತಾನು ಆಗಾಗ ಮಗಳನ್ನು ವಿಚಾರಿಸುತ್ತಿದ್ದರೂ, ಅವಳು ಏನನ್ನೂ ಹೇಳಿರಲಿಲ್ಲ. ಆರೋಪಿಯು ತಮ್ಮ ಎದುರು ಮನೆಯವನೇ ಆಗಿದ್ದು, ಆತನ ನಡತೆ ಸರಿಯಿರಲಿಲ್ಲ ಎಂದು ಆಕೆಯ ತಂದೆ ಹೇಳಿದ್ದಾರೆ. ಆತ ಏನು ಮಾಡುತ್ತಿದ್ದ ಎಂಬುದು ಯಾರಿಗೂ ತಿಳಿದಿಲ್ಲಎಂದು ಹೇಳಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶ್ರೀರಾಮಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

