ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭ

0
7

ಕಿರಿಮಂಜೇಶ್ವರ: ಜುಲೈ31 ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭವು ಅತ್ಯಂತ ಅದ್ದೂರಿಯಾಗಿ ನೆರವೇರಿತು.

ಮುಖ್ಯ ಅತಿಥಿಗಳಾದ ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ಹಿರಿಯರ ಮಾರ್ಗದರ್ಶನದ ಮಾತುಗಳು ನಮ್ಮಲ್ಲಿ ಶಿಸ್ತು, ಸಂಯಮ ಮತ್ತು ನಾಯಕತ್ವದ ಕೌಶಲ್ಯಗಳನ್ನು ಕಲಿಸಿಕೊಡು ತ್ತದೆ. ನಮ್ಮ ದೇಶದ ಭವಿಷ್ಯ ಯುವಶಕ್ತಿಯ ಮೇಲಿರುವುದರಿಂದ ಯುವ ಪೀಳಿಗೆಯಲ್ಲಿ ದೇಶದ ಕುರಿತಾಗಿ ಹೊಸ ಹೊಸ ಕನಸುಗಳನ್ನು ಕಟ್ಟುವಂತಹ ಅವಕಾಶಗಳನ್ನು ಸೃಷ್ಟಿಸಿಕೊಡಬೇಕು. ಎಳವಿನಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿ ನಾಯಕರುಗಳಿಗೆ ಪದಗ್ರಹಣ ಮಾಡಿ, ಅವರಿಗೆ ಹೊಣೆಗಾರಿಕೆಯನ್ನು ವಹಿಸಿರುವುದು ಅತ್ಯಂತ ಸ್ತುತ್ಯಾರ್ಹ ವಾಗಿದೆ ಎಂದರು.

ಈ ಸಮಾರಂಭದಲ್ಲಿ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದ ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರಾದ ಉದಯ್ ಕುಮಾರ್ ಹಟ್ಟಿಯಂಗಡಿ ಅವರು ಶಾಲಾ ಅವಧಿಯಲ್ಲಿ ನಾಯಕರ ಜವಾಬ್ದಾರಿ ದೊರೆತಿರುವುದು ವಿದ್ಯಾರ್ಥಿಗಳಿಗೊಂದು ಸುವರ್ಣ ಅವಕಾಶವಾಗಿದ್ದು, ಇದು ವಿದ್ಯಾರ್ಥಿ ಜೀವನಕ್ಕೆ ಭದ್ರ ಬುನಾದಿಯಾಗಲಿದೆ. ಇಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಂಡು ದೇಶದ ಸಂಪತ್ತಾಗಬೇಕು ಎಂದು ಕರೆಕೊಟ್ಟರು.

ಇನ್ನೊರ್ವ ಅತಿಥಿ ಬೈಂದೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿಮ್ಮೆಶ್ ಅವರು ಸಮಾಜಕ್ಕೆ ಸತ್ಪ್ರಜೆಗಳನ್ನು ಒದಗಿಸುವಲ್ಲಿ ಶಾಲೆಗಳ ಪಾತ್ರ ಪ್ರಧಾನವಾಗಿದೆ. ಸಮಾಜವನ್ನು ಬದಲಾಯಿಸುವ ಹೊಣೆ ವಿದ್ಯಾರ್ಥಿಗಳ ಮೇಲಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೆಯೇ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದರು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರರು ಶಾಲೆಯ ಸುಗಮ ಕಾರ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿ ನಾಯಕರುಗಳ ಪಾತ್ರ ಮಹತ್ವದ್ದಾಗಿರುವುದರಿಂದ ಇಂದು ನೂತನವಾಗಿ ಪದಗ್ರಹಣಗೊಂಡ ವಿದ್ಯಾರ್ಥಿ ನಾಯಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು.ಹಾಗೆಯೇ ಅವರು ಶಾಲೆಯ ಅಭಿವೃದ್ಧಿಯ ಕುರಿತಾಗಿ ತಮ್ಮಲ್ಲಿನ ಹೊಸ ಹೊಸ ಆಲೋಚನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿರಬೇಕು ಎಂದು ತಿಳಿಸಿದರು.

ಜನತಾ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ, ವಿದ್ಯಾರ್ಥಿ ನಾಯಕ ಮಾ. ಯಶಸ್ ಬಿ ದೇವಾಡಿಗ, ವಿದ್ಯಾರ್ಥಿ ನಾಯಕಿ ಕುಮಾರಿ ಶ್ರೀರಕ್ಷಾ ವೇದಿಕೆಯಲ್ಲಿದ್ದರು.

ಈ ಕಾರ್ಯಕ್ರಮದಲ್ಲಿ ಬೋಧಕ/ ಬೋಧಕೇತರ ವರ್ಗದವರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

ಕಾರ್ಯಕ್ರಮವನ್ನು ಮುಖ್ಯಶಿಕ್ಷಕಿ ದೀಪಿಕಾ ಆಚಾರ್ಯ ಅವರು ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ವಿದ್ಯಾರ್ಥಿ ನಾಯಕಿ ಕುಮಾರಿ ಶ್ರೀರಕ್ಷಾ ವಂದಿಸಿ,ಸಹ ಶಿಕ್ಷಕಿ ಸ್ವಪ್ನ ಪೂಜಾರಿ ಕಾರ್ಯಕ್ರಮ ವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here