ಬ್ರಹ್ಮಾವರ : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಮಹಿಳೆಯರ ಬ್ಯೂಟಿ ಪಾರ್ಲರ್ ತರಬೇತಿಯ ಸಮಾರೋಪ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀಮತಿ. ವನಿತಾ, ಮಾಲಕರು ವಿ ಲೈಕ್ ಬ್ಯೂಟಿ ಪಾರ್ಲರ್, ಗೋಳಿಯಂಗಡಿ.
ಅವರು ಮಹಿಳೆಯರ ಬ್ಯೂಟಿ ಪಾರ್ಲರ್ ತರಬೇತಿಯ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಸಲಕರಣೆಗಳನ್ನು ವಿತರಿಸಿ, ಮಾತನಾಡಿ, ತಾನು ಇದೇ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದು, ಅನುಭವವನ್ನು ಪಡೆದುಕೊಂಡು ಇದೀಗ 2 ಪಾರ್ಲರ್ ಗಳನ್ನು ಹೊಂದಿ ಯಶಸ್ವಿಯಾಗಿ ಮುಂದುವರಿಯುತ್ತಿದ್ದೇನೆ, ಎಂದರು. ಅವರು ಪಟ್ಟ ಶ್ರಮ ಹಾಗೂ ಕೆಲಸದ ಮೇಲಿನ ಆಸಕ್ತಿಯನ್ನು ಬಹಳ ವಿವರವಾಗಿ ಶಿಬಿರಾರ್ಥಿಗಳಿಗೆ ತಿಳಿಸಿದರು. ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಹೆಣ್ಣುಮಕ್ಕಳ ಆಸಕ್ತಿಯ ವಿಷಯವಾಗಿದೆ. ಈ ಉದ್ಯಮದಲ್ಲಿ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಹಾಗಾಗಿ ಎಲ್ಲರಿಗೂ ಸೌಂದರ್ಯದ ಬಗ್ಗೆ ಕಾಳಜಿ ಇರುತ್ತದೆ. ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಕೆಲಸ ವನ್ನು ಮಾಡಿ ಸಮಾಜದಲ್ಲಿ ಯಶಸ್ವಿ ಉದ್ಯಮಿಗಳಾಗಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕಾರದ ಚೈತ್ರ ಕೆ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ತರಬೇತಿಯನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡಿದ್ದೀರಿ, ಬಳಸಿಕೊಂಡಿದ್ದೀರಿ ಅನ್ನುವುದು ಬಹಳ ಮುಖ್ಯವಾಗುತ್ತದೆ. ಸಂಸ್ಥೆ ಶಿಬಿರಾರ್ಥಿಗಳಿಂದ ಆಶಿಸುವುದು ನಿಮ್ಮ ಯಶಸ್ಸು ಮಾತ್ರ ಎಂದರು. ಸಂಸ್ಥೆಯೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ ಸಂಸ್ಥೆಯನ್ನು ಸಂಪರ್ಕಿಸಿ, ಭೇಟಿ ನೀಡಿ ಎಂದರು. ಮುಂದಿನ ದಿನಗಳಲ್ಲಿ ಸಂಸ್ಥೆಯಲ್ಲಿ ಹೆಚ್ಚಿನ ತರಬೇತಿಗಳು ನಡೆಯುತ್ತವೆ. ಅವುಗಳ ಬಗೆ ನಿಮ್ಮ ಪ್ರೀತಿ ಪಾತ್ರರಲ್ಲಿ ವಿಷಯವನ್ನು ಹಂಚಿಕೊಳ್ಳಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಕಛೇರಿ ಸಹಾಯಕರಾದ ಶಾಂತಪ್ಪ ನಿರೂಪಿಸಿ, ಸ್ವಾಗತಿಸಿದರು. ಹಿರಿಯ ಕಛೇರಿ ಸಹಾಯಕರಾದ ರವಿ ವಂದಿಸಿದರು.

