ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಕಚೇರಿ ಸ್ಥಾಪಿಸಲು ಗೃಹ ಸಚಿವರಿಗೆ ಸಂಸದರಿಂದ ಮನವಿ
ದೆಹಲಿ: ಹಿಂದೂ ಕಾರ್ಯಕರ್ತರ ಹತ್ಯೆ, ಡ್ರಗ್ಸ್ ಮಾಫಿಯಾ, ಭಟ್ಕಳ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಉಗ್ರ ಚಟುವಟಿಕೆಯ ಸ್ಲೀಪರ್ ಸೆಲ್‌ಗಳ ಆತಂಕದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಆದಷ್ಟು ಬೇಗ ರಾಷ್ಟ್ರೀಯ ತನಿಖಾ ದಳ(NIA)ದ ಕಚೇರಿ ಸ್ಥಾಪಿಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಸಂಸದರು, ಮಂಗಳೂರು ತನ್ನ ಸೂಕ್ಷ್ಮ ಭೌಗೋಳಿಕ ಸ್ಥಾನದಿಂದಾಗಿ, ಮತ್ತು ಭಟ್ಕಳ, ಕಾಸರಗೋಡಿನಂತಹ ಉಗ್ರ ಚಟುವಟಿಕೆಗಳ ಕೇಂದ್ರಗಳಿಗೆ ಹತ್ತಿರವಿರುವುದರಿಂದ, ರಾಷ್ಟ್ರ ವಿರೋಧಿ ಶಕ್ತಿಗಳು ತಮ್ಮ ವಕ್ರ ದೃಷ್ಟಿ ಬೀರಿರುವುದಕ್ಕೆ ಕೆಲವೊಂದು ಘಟನೆಗಳು ಸಾಕ್ಷಿಯಾಗಿವೆ. ಅಲ್ಲದೆ ನಿಷೇಧಿತ ಪಿಎಫ್‌ಐ ಸಂಘಟನೆ ರಾಜಕೀಯ ಮುಖವಾಣಿ ಎಸ್‌ಡಿಪಿಐ ತನ್ನ ಮೂಲಕ ಹೊಸ ರೂಪ ತಳೆದು ಮುಂದುವರಿದಿರುವುದು ಮಾತ್ರವಲ್ಲದೇ , ಪ್ರಜಾಪ್ರಭುತ್ವದ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಮೂಲಭೂತವಾದಿ, ಅಜೆಂಡಾಗಳನ್ನು ಮುಂದುವರೆಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಬಂಧನಗಳು ಮತ್ತು ಚಟುವಟಿಕೆಗಳು ಕಳೆದ 10 ವರ್ಷಗಳಲ್ಲಿ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖ ಸದಸ್ಯರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಎನ್‌ಐಎ ತನಿಖಾಧಿಕಾರಿಗಳು ಈಗಾಗಲೇ ಬಂಧಿಸಿದ್ದಾರೆ. ಪಿಎಫ್‌ಐ ಸಂಘಟನೆಯ ಗುಪ್ತ ಭಾಗವಾಗಿದ್ದ ಸರ್ವೀಸ್ ಟೀಂನ ಅಸ್ತಿತ್ವ, ರಹಸ್ಯ ಸಭೆಗಳು, ತರಬೇತಿ ಕೇಂದ್ರದ ಬಗ್ಗೆಯೂ ಎನ್‌ಐಎ ತನಿಖೆಗಳು ಬೆಳಕುಚೆಲ್ಲಿತ್ತು. ಹೀಗಿರುವಾಗ, ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸುವ ಅಗತ್ಯತೆಯನ್ನು ಕ್ಯಾ. ಚೌಟ ಅವರು ಗೃಹ ಸಚಿವರಿಗೆ ಮನವರಿಕೆ ಮಾಡಿದ್ದಾರೆ.
ಈ ನಡುವೆ, ಕಡಲ ನಗರಿಯಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಅಂಕುಶ ಹಾಕಲು ವಿನಂತಿಸಿರುವ ಸಂಸದ ಕ್ಯಾ. ಚೌಟ ಅವರು, ಕಳೆದ ಮಾರ್ಚ್ ನಲ್ಲಿ ಮಂಗಳೂರಿನಲ್ಲಿ ₹75 ಕೋಟಿ ಮೌಲ್ಯದ 37 ಕೆ.ಜಿ.ಗೂ ಹೆಚ್ಚು ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಅಂತರರಾಷ್ಟ್ರೀಯ ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಪ್ರಸಕ್ತ ವರ್ಷದಲ್ಲೇ ಇಲ್ಲಿವರೆಗೆ ಜಿಲ್ಲೆಯಲ್ಲಿ 375ಕ್ಕೂ ಹೆಚ್ಚು ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 67ಕ್ಕೂ ಹೆಚ್ಚು ವ್ಯಕ್ತಿಗಳು ಬಂಧನವಾಗಿರುವ ಬಗ್ಗೆ ಅಂಕಿ-ಅಂಶಗಳಿವೆ. ಡ್ರಗ್ಸ್ ಚಟುವಟಿಕೆಗಳು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು, ಕುಮ್ಮಕ್ಕು ಒದಗಿಸುವುದಲ್ಲದೇ, ಸಾಮಾಜಿಕ ಅಸ್ಥಿರತೆ, ಅಪರಾಧ ಹಾಗೂ ಗಡಿಗಳಲ್ಲಿ ಭದ್ರತಾ ಸವಾಲುಗಳನ್ನು ಹೆಚ್ಚಿಸುವ ಮೂಲಕ ರಾಷ್ಟ್ರೀಯ ಭದ್ರತೆಗೂ ಗಂಭೀರ ಬೆದರಿಕೆಯಾಗುತ್ತಿದೆ ಎಂದು ಸಂಸದರು ಗೃಹ ಸಚಿವರಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಎನ್‌ಐಎ ಇತ್ತೀಚೆಗೆ ಮಂಗಳೂರಿನಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸಿರುವುದು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದ್ದು ಜಿಹಾದಿ ಉಗ್ರವಾದ, ಸಂಘಟಿತ ಅಪರಾಧ ಮತ್ತು ಅಂತರರಾಷ್ಟ್ರೀಯ ಕಳ್ಳಸಾಗಣೆ ಸೇರಿದಂತೆ ಪುನರಾವರ್ತಿತ ಬೆದರಿಕೆಗಳನ್ನು ಪರಿಗಣಿಸಿ, ಮಂಗಳೂರಿನಲ್ಲಿ ಸಮಗ್ರ ಗುಪ್ತಚರ ಸಮನ್ವಯ ಮತ್ತು ಕಾರ್ಯಾಚರಣೆಯ ಸಾಮರ್ಥ್ಯದೊಂದಿಗೆ ಶಾಶ್ವತವಾದ ಸಂಪೂರ್ಣ ಸುಸಜ್ಜಿತ ಎನ್‌ಐಎ ಕಚೇರಿಯನ್ನು ಸ್ಥಾಪಿಸಲು ವಿನಂತಿಸಿದ್ದು, ಇದರಿಂದ ಇಡೀ ದಕ್ಷಿಣ ಭಾರತಕ್ಕೆ ಒಂದು ದೃಢ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸುವ ಕರಾವಳಿಗರ ಬೇಡಿಕೆಯನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕೆಂದು ಎಂದು ಕ್ಯಾ. ಬ್ರಿಜೇಶ್ ಚೌಟ ಅವರು ಗೃಹ ಸಚಿವ ಅಮಿತ್ ಶಾ ಅವರಲ್ಲಿ ವಿನಂತಿಸಿದ್ದಾರೆ.
ಮೂರು ತಿಂಗಳ ಹಿಂದೆ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಎನ್‌ಐಎ ತನಿಖೆಗೆ ವಹಿಸಿದೆ. ಪ್ರಕರಣದ ಗಂಭೀರತೆ ಅರಿತು ಸುಹಾಸ್ ಹತ್ಯೆಯನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸುವಲ್ಲಿ ಕೇಂದ್ರ ಗೃಹ ಸಚಿವರು ಮುತುವರ್ಜಿ ವಹಿಸಿ ತ್ವರಿತ ಕ್ರಮ ಕೈಗೊಂಡಿರುವುದಕ್ಕೆ ಸಂಸದ ಬ್ರಿಜೇಶ್ ಚೌಟ ಅವರು ಇಂದು ಅಮಿತ್ ಶಾ ಅವರನ್ನು ಭೇಟಿಯಾದ ವೇಳೆ ಸುಹಾಸ್ ಹೆತ್ತವರು, ಕಾರ್ಯಕರ್ತರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ನಿರ್ಧಾರವು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವ ಭರವಸೆ ನೀಡಿದೆ ಮತ್ತು ದಕ್ಷಿಣ ಕನ್ನಡದ ಜನತೆಗೆ ಭದ್ರತೆಯ ಭಾವನೆಯನ್ನು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು.