ಬಂಟ್ವಾಳ:ಇಲ್ಲಿನ ಪುದು ಗ್ರಾಮದ ಸುಜೀರು ಎಂಬಲ್ಲಿ ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ನೇಣಿಗೆ ಶರಣಾದ ಘಟನೆ ಸೋಮವಾರ ಮಧ್ಯಾಹ್ನದ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾಣ್ ಗ್ರಾಮದ ಕಾಂಜಿಲಕೋಡಿ ನಿವಾಸಿ ಫಿಟ್ಟರ್ ವೃತ್ತಿಯ ಸುಧೀರ್ (೩೦)ಎಂದು ಗುರುತಿಸಲಾಗಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡ ಯುವತಿ ದಿವ್ಯ ಯಾನೆ ದೀಕ್ಷಿತಾ(೨೬) ಇವರನ್ನು ಚಿಕಿತ್ಸೆಗಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಳೆದ ೮ ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕೆಲವು ತಿಂಗಳುಗಳಿAದ ಅವಿರಿಬ್ಬರ ನಡುವೆ ಪರಸ್ಪರ ಮನಸ್ತಾಪ ಉಂಟಾಗಿತ್ತು. ಆದರೂ ಯುವಕ ಸುಧೀರ್ ಆಕೆ ಹೋದಲ್ಲೆಲ್ಲಾ ಹಿಂಬಾಲಿಸುತ್ತಿದ್ದನು ಎಂದು ಆರೋಪಿಸಲಾಗಿದೆ. ಸೋಮವಾರ ಬೆಳಿಗ್ಗೆ ಫರಂಗಿಪೇಟೆ ಸಮೀಪದ ಸಜೀರು ಮಲ್ಲಿ ಎಂಬಲ್ಲಿ ಯುವತಿ ಮನೆಗೆ ಬಂದು ಮದುವೆಯಾಗುವಂತೆ ಮತ್ತೆ ಯುವತಿಯನ್ನು ಒತ್ತಾಯಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಅವರಿಬ್ಬರ ಮಧ್ಯೆ ಜಗಳ ನಡೆದಿದೆ. ಇದರಿಂದಾಗಿ ಸಿಟ್ಟಾದ ಆರೋಪಿ ಸುಧೀರ್ ತಾನು ತಂದಿದ್ದ ಚಾಕುವಿನಲ್ಲಿ ಆಕೆಗೆ ಚುಚ್ಚಿದ್ದಾನೆ. ಆತನಿಂದ ತಪ್ಪಿಸಿಕೊಂಡು ಯುವತಿ ಸ್ವಲ್ಪ ದೂರದಲ್ಲಿ ಕುಸಿದು ಬಿದ್ದಿದ್ದಾಳೆ. ಇದೇ ವೇಳೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಆರೋಪಿಯು ಅದೇ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಸಂದರ್ಭದಲ್ಲಿ ಯುವತಿ ತಾಯಿ ಮತ್ತು ತಂಗಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದ್ದು, ಯುವತಿಯನ್ನು ಸ್ಥಳೀಯ ರಿಕ್ಷಾ ಚಾಲಕ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳು ದಿವ್ಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿ ಸುಧೀರ್ ಈ ಹಿಂದೆ ಕೂಡ ಫರಂಗಿಪೇಟೆ ಬಳಿ ಟವರ್ ಹತ್ತಿ ಈಕೆಯನ್ನು ಹೆದರಿಸಿದ್ದನು ಎಂದು ತಿಳಿದು ಬಂದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ.