ಆನ್‌ಲೈನ್ ಜೂಜಾಟ ನಿಯಂತ್ರಣಕ್ಕೆ ರಾಷ್ಟ್ರೀಯ ಕಾನೂನು ರೂಪಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸುರಾಜ್ಯ ಅಭಿಯಾನದಿಂದ ಗೃಹ ಸಚಿವರಿಗೆ ಮನವಿ

0
7

ಬೆಂಗಳೂರು: ಇಂದು “ಸುರಾಜ್ಯ ಅಭಿಯಾನ” ಸಂಘಟನೆಯ ಪ್ರತಿನಿಧಿ ತಂಡವು ಕರ್ನಾಟಕ ರಾಜ್ಯದ ಗೃಹ ಸಚಿವರಾದ ಶ್ರೀ ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ, ಆನ್‌ಲೈನ್ ಗೇಮಿಂಗ್ ನಿಯಂತ್ರಣ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿಪತ್ರ ಸಲ್ಲಿಸಿತು.

ಭಾರತ ಸಂವಿಧಾನದ ಕಲಂ 252ರ ಅಡಿಯಲ್ಲಿ ರಾಷ್ಟ್ರಮಟ್ಟದ ಸಂಯೋಜಿತ ಕಾನೂನು ರೂಪಿಸಲು ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ 2025ರ ಮೂಲಕ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಸುರಾಜ್ಯ ಅಭಿಯಾನ ಪ್ರಶಂಸಿಸಿದೆ. “ಕೌಶಲ್ಯದ ಆಟಗಳು” ಮತ್ತು “ಅಡ್ವಾನ್ಸ್ ಬೆಟ್ಟಿಂಗ್ ಅಥವಾ ಜೂಜಾಟದ ಆಟಗಳು” ನಡುವೆ ಸ್ಪಷ್ಟತೆ ನೀಡಿರುವುದು ಹಾಗೂ ಕರ್ನಾಟಕ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರ (KOGBRA) ರಚನೆಯ ಪ್ರಸ್ತಾವನೆ ಸಾರ್ವಜನಿಕ ಆರೋಗ್ಯ ಹಾಗೂ ಯುವ ಸಮುದಾಯದ ರಕ್ಷಣೆಗೆ ಉದ್ದೇಶಿತವಾದ ಮಹತ್ವದ ಹೆಜ್ಜೆಯೆಂದು ಮನವಿಯಲ್ಲಿ ದಾಖಲಿಸಲಾಗಿದೆ. ಆದರೆ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ವ್ಯವಹಾರದ ಹಿನ್ನೆಲೆಯಲ್ಲಿ, ರಾಜ್ಯ ಮಟ್ಟದ ಕಾನೂನು ಮಾತ್ರ ಪರಿಣಾಮಕಾರಿಯಲ್ಲ. ಇದಕ್ಕಾಗಿ ರಾಷ್ಟ್ರೀಯ ಮಟ್ಟದ ಏಕೀಕೃತ ಕಾನೂನು ಅಗತ್ಯವಾಗಿದೆ ಎಂದು ಮನವಿ ತಿಳಿಸಿದೆ.

ಮನವಿಯಲ್ಲಿ ನೀಡಲಾದ ಪ್ರಮುಖ ಅಂಶಗಳು:
1. ಕಳೆದ 3 ವರ್ಷಗಳಲ್ಲಿ ಆನ್‌ಲೈನ್ ಜೂಜಾಟದ ಕಾರಣ 18 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2. ಮಾನಸಿಕ ತಜ್ಞರ ಪ್ರಕಾರ, ಐಪಿಎಲ್ ಮುಂತಾದ ಕ್ರೀಡಾ ಋತುವಿನಲ್ಲಿ ಆಸ್ಪತ್ರೆಗಳಲ್ಲಿ 15% ರೋಗಿಗಳು ಜೂಜಾಟದ ಆಸಕ್ತಿಯಿಂದ ಬಾಧಿತರಾಗಿದ್ದಾರೆ.
3. ಡ್ರೀಮ್11, MPL, ರಮ್ಮಿಕಲ್ಚರ್, 1xBet, ಪ್ಯಾರಿಮ್ಯಾಚ್ ಮುಂತಾದ ಅನೇಕ ಪ್ಲಾಟ್‌ಫಾರ್ಮ್‌ಗಳು ಪ್ರಕರಣಗಳಲ್ಲಿ ನಮೂದಾಗಿವೆ.
4. ನ್ಯಾಯಾಲಯದಲ್ಲಿ “ಫ್ಯಾಂಟಸಿ ಆಟಗಳು” ಕೌಶಲ್ಯ ಆಧಾರಿತವೆಂದು ನಿರ್ಧಾರವಾದರೂ, ಸುಪ್ರೀಂ ಕೋರ್ಟ್‌ನ (ಕೆ.ಆರ್. ಲಕ್ಷ್ಮಣನ್ ವರ್ಸಸ್ ತಮಿಳುನಾಡು) ತೀರ್ಪಿನ ಪ್ರಕಾರ, ಚಾನ್ಸ್ ಅಂಶ ಹೆಚ್ಚಾದರೆ ಅದನ್ನು ಜೂಜಾಟವೆಂದು ಪರಿಗಣಿಸಬೇಕು.

ಸುರಾಜ್ಯ ಅಭಿಯಾನದ ಬೇಡಿಕೆಗಳು :
1. ತಕ್ಷಣ ಕರ್ನಾಟಕ ಪೊಲೀಸ್ ತಿದ್ದುಪಡಿ ಮಸೂದೆ 2025 ಅನ್ನು ಅಂಗೀಕರಿಸಬೇಕು.
2. Addictive gaming helpline ಮತ್ತು ಶಾಲಾ ಪಠ್ಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸೇರಿಸಬೇಕು.
3. ಅಕ್ರಮ ಜೂಜಾಟದ ಪ್ಲಾಟ್‌ಫಾರ್ಮ್‌ಗಳಿಗೆ ಜಾಹೀರಾತು ನೀಡುವ ಸೆಲೆಬ್ರಿಟಿಗಳು/ಇನ್ಫ್ಲುಯೆನ್ಸರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
4. ಸಂವಿಧಾನದ ಆರ್ಟಿಕಲ್ 252 ಅಡಿಯಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು.

ಈ ಮನವಿಯನ್ನು ನೀಡಿದ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ “ಸುರಾಜ್ಯ ಅಭಿಯಾನ” ಕರ್ನಾಟಕ ರಾಜ್ಯ ಸಂಯೋಜಕರಾದ ಶ್ರೀ ಮೋಹನ್ ಗೌಡ, ಶ್ರೀ ವೆಂಕಟೇಶಮೂರ್ತಿ ಎಚ್. ಎಸ್., ಶ್ರೀಶೈಲ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here