ಸುರತ್ಕಲ್: ಬಾಗಿಲು ಹಾಕಿದ ಲಕ್ಕಿಸ್ಕೀಮ್‌ಗಳು! ದುಬಾರಿ ಗಿಫ್ಟ್‌ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ!

0
7

ಮಂಗಳೂರು: ಮೋಸ ಹೋಗೋರು ಇರೋತನಕ ಮೋಸ ಮಾಡೋರು ಮಾಡುತ್ತಲೇ ಇರುತ್ತಾರೆ. ಈ ಮಾತು ಮಂಗಳೂರಿನ ಲಕ್ಕಿ ಸ್ಟೀಮ್ ಪಾಲಿಗೆ ಅಕ್ಷರಶಃ ನಿಜವಾಗಿದೆ. ಕಳೆದ ನಾಲೈದು ವರ್ಷಗಳಲ್ಲಿ ಇಂಥ ಸ್ಕಿಮ್ ಹೆಸರಲ್ಲಿ ಕೆಲವು ಖದೀಮರು ಜನಸಾಮಾನ್ಯರನ್ನು ಯಾಮಾರಿಸಿ ನೂರು ಕೋಟಿಗೂ ಹೆಚ್ಚು ಲೂಟಿ ಮಾಡಿದ್ದಾರೆ. ಆದರೆ ಹಣ ಸಿಗುತ್ತೆ ಎನ್ನುವ ಭರವಸೆಯಲ್ಲಿ ‘ಅತಿ ಬುದ್ಧಿವಂತರು’ ಇನ್ನೂ ಪೊಲೀಸ್ ಕೇಸನ್ನೂ ನೀಡದೆ ಬಣ್ಣದ ಮಾತು ನಂಬಿಕೊಂಡು ಕುಳಿತಿದ್ದಾರೆ.

ಸುರತ್ಕಲ್, ಕಾಟಿಪಳ್ಳ ಕೇಂದ್ರೀಕರಿಸಿ ಕಳೆದ ಆರು ವರ್ಷಗಳಲ್ಲಿ ಎಂಟಕ್ಕೂ ಹೆಚ್ಚು ಇಂಥ ನಕಲಿ ಸ್ಕಿಮ್ ಕಾರ್ಯಾಚರಣೆ ಮಾಡ್ತಿತ್ತು. ಮಂಗಳೂರು, ಉಳ್ಳಾಲದಲ್ಲಿ ಹತ್ತಕ್ಕೂ ಹೆಚ್ಚು ಲಕ್ಕಿ ಸ್ಟೀಮ್ ಇದೆ. ತಿಂಗಳಿಗೆ ಒಂದು ಸಾವಿರ ಕಟ್ಟಿದರೆ ಸಾಕು, ಪ್ರತಿ ತಿಂಗಳು ಕಾರು, ಫ್ಲಾಟ್ ಬಹುಮಾನ ಗೆಲ್ಲುವ ಆಮಿಷವೊಡ್ಡಿ ಜನರನ್ನು ಯಾಮಾರಿಸಿ ಹಣ ಕಿತ್ತುಕೊಂಡಿದ್ದಾರೆ. ಈ ರೀತಿ ಹಣ ಪೀಕಿಸಿಕೊಂಡ ಕಾಟಿಪಳ್ಳದ ನ್ಯೂ ಶೈನ್, ನ್ಯೂ ಇಂಡಿಯಾ, ಬಿಎಂಆರ್ ಎನ್ನುವ ಹೆಸರಲ್ಲಿ ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿದ್ದ ಖದೀಮರು ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ.

ನ್ಯೂ ಇಂಡಿಯಾ ಹೆಸರಲ್ಲಿ ಅಶ್ರಫ್ ಎನ್ನುವಾತ 18 ಸೀಸನ್ನಲ್ಲಿ ಅಂದಾಜು 30 ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿದ್ದು ಜನರನ್ನು ದೋಚಿ ಈಗ ನಾಪತ್ತೆಯಾಗಿದ್ದಾನೆ. ಒಂದು ಸೀಸನಲ್ಲಿ 12 ತಿಂಗಳು ಎಂದು ಹೇಳಿ ಸ್ಟೀಮ್ ಆರಂಭಿಸುತ್ತಿದ್ದ ಈ ಖದೀಮರು ಆನಂತರ 4-5 ತಿಂಗಳಲ್ಲಿ ಮತ್ತೊಂದು ಸ್ಕಿಮ್ ಮಾಡುತ್ತಿದ್ದರು. ಪ್ರತಿ ತಿಂಗಳು ಡ್ರಾದಲ್ಲಿ ಫ್ಲಾಟ್, ಥಾರ್ ಜೀಪು, ಐದು ಲಕ್ಷ ಮೌಲ್ಯದ ಚಿನ್ನದ ಸರ ಗೆಲ್ಲಬಹುದು ಎಂದು ಜನರನ್ನು ಆಕರ್ಷಿಸುತ್ತಿದ್ದರು. ಒಂದು ಸೀಸನಲ್ಲಿ 10ರಿಂದ 15 ಸಾವಿರದಷ್ಟು ಕಾರ್ಡ್ ಹಂಚಿಕೆ ಮಾಡಿದ್ದು ಒಂದೊಂದು ಸ್ಟೀಮ್ ಹೆಸರಲ್ಲಿ ಸಾವಿರಾರು ಜನರು ಹಣ ಕಟ್ಟಿ ಮೋಸ ಹೋಗಿದ್ದಾರೆ. ಈ ಸ್ಟೀಮ್ ಹೆಸರಲ್ಲಿ ವರ್ಷಕ್ಕೆ ಕೇವಲ 12 ಮಂದಿಗೆ ಮಾತ್ರ ಬಹುಮಾನ ನೀಡುವ ಭರವಸೆ ಇರುತ್ತದೆ. ಡ್ರಾವನ್ನು ನೇರ ಲೈವ್ ಮಾಡುತ್ತೇವೆಂದು ತೋರಿಸಿದ್ದರೂ ಈ ದುಬಾರಿ ಬಹುಮಾನ ಪಡೆದವರಿಲ್ಲ. ಕೆಲವರಿಗೆ ಸಿಕ್ಕಿದೆ ಎನ್ನುವ ವದಂತಿ ಸೃಷ್ಟಿಸಿ, ಕೆಲವರಿಗೆ ಮನೆ ಕಟ್ಟಿಸಿಕೊಡುತ್ತಿದ್ದೇವೆಂದು ಹೇಳಿ, ಇನ್ನು ಕೆಲವರಿಗೆ ಸ್ಕೂಟರ್, ಕಡಿಮೆ ಮೊತ್ತದ ಕಾರು ತೆಗೆಸಿಕೊಟ್ಟು ಯಾಮಾರಿಸುತ್ತಿದ್ದರು. ಇದೇ ನೆಪದಲ್ಲಿ ಬಹುಮಾನ ಗೆಲ್ಲದೆ ಉಳಿದುಬಿಟ್ಟವರನ್ನು ಮತ್ತಷ್ಟು ಹಣ ಹಾಕಿದರೆ ದೊಡ್ಡ ಗಿಫ್ಟ್ ಗೆಲ್ಲಬಹುದೆಂದು ಮತ್ತೊಂದು ಸೀಸನ್ನಿಗೆ ಸೇರಿಸುತ್ತಿದ್ದರು. ಇದೇ ಪ್ರಕಾರದಲ್ಲಿ ಒಂದೊಂದು ಸೀಸಲ್ಲಿ ಕಡಿಮೆ ಎಂದರೂ ಹತ್ತು ಸಾವಿರಕ್ಕು ಹೆಚ್ಚು ಜನರು ಸೇರ್ಪಡೆ ಆಗುತ್ತಿದ್ದರು.

ಮಾಜಿ ಪಿಎಫ್‌ಐ ಆಸಾಮಿ ಖುರೇಷಿ
ಈ ಖುರೇಷಿ ಎನ್ನುವಾತ ಹಿಂದೆ ಪಿಎಫ್‌ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ವ್ಯಕ್ತಿ. 2016ರಲ್ಲಿ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಪೊಲೀಸರು ಹಲ್ಲೆ ಮಾಡಿದ್ದಾಗಿ ಹೇಳಿ ಕಿಡ್ನಿಗೆ ಪೆಟ್ಟು ಬಿದ್ದಿದೆಯೆಂದು ಆಸ್ಪತ್ರೆಗೆ ದಾಖಲಾಗಿದ್ದ. ಆನಂತರ ಕೇಸಿನಿಂದ ಹೊರಬಂದು ಹನಿಟ್ರಾಪ್ ಜಾಲದಲ್ಲಿ ತೊಡಗಿಸಿ ವಿಡಿಯೋ ಮುಂದಿಟ್ಟು ಹಣ ಕೀಳುತ್ತಿದ್ದ. ಚಿಕ್ಕಮಗಳೂರಿನ ಹನಿಟ್ರ್ಯಾಪ್ ಪ್ರಕರಣದ ಬಳಿಕ ಈತನನ್ನು ಎಸ್ಟಿಪಿಐ, ಪಿಎಫ್‌ಐನಿಂದ ಸ್ವಲ್ಪ ದೂರ ಇರಿಸಲಾಗಿತ್ತು. ಇದೇ ಖುರೇಷಿ ಬಿಎಂಆರ್, ವಿಶನ್ ಇಂಡಿಯಾ ರೀತಿಯಲ್ಲೆ ತನ್ನದೇ ಸ್ಟೀಮ್ ಆರಂಭಿಸಿ ಕೋಟ್ಯಂತರ ರೂಪಾಯಿ ಕಮಾಯಿ ಮಾಡಿದ್ದಾನೆ. ಅಂದಾಜು ಇಂತಹ ಸ್ಟೀಮಲ್ಲಿ ಒಬ್ಬೊಬ್ಬರು ಕಡಿಮೆ ಅಂದ್ರೂ 25 ಕೋಟಿ ಸಂಗ್ರಹ ಮಾಡಿದ್ದು ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯಕ್ಕೆ ಕಾಟಿಪಳ್ಳದಲ್ಲಿ ಎರಡು ಸ್ಟೀಮ್ ಪೂರ್ತಿ ಬಂದ್ ಆಗಿದ್ದು 20 ಸಾವಿರಕ್ಕೂ ಹೆಚ್ಚು ಜನರಿಗೆ ದೋಖಾ ಆಗಿದೆ.
ವಿಶೇಷ ಅಂದ್ರೆ, ಇಂಥ ಸ್ಕಿಮ್ ಗಳಲ್ಲಿ ಹೆಚ್ಚಾಗಿ ಹಣ ಕಳಕೊಂಡವರು ಸುಳ್ಯ ಪುತ್ತೂರು, ಬೆಳ್ತಂಗಡಿ, ಮೂಡುಬಿದ್ರೆ ಕಡೆಯವರಂತೆ. ಹಳ್ಳಿ ಕಡೆಯ ಜನರನ್ನು ಏಜಂಟರು ಯಾಮಾರಿಸಿ ಈ ಸ್ಟೀಮಿಗೆ ಹೆಚ್ಚೆಚ್ಚು ಸೇರಿಸಿದ್ದಾರೆ. ಕಾಟಿಪಳ್ಳ, ಸುರತ್ಕಲ್ ನಲ್ಲಿ ಕಚೇರಿ ಇದ್ದರೂ ದೂರದ ಮಂದಿಯೇ ಹೆಚ್ಚು ಇವರ ಕರಾಮತ್ತಿಗೆ ಬಲಿಯಾಗಿದ್ದಾರೆ. ಪೊಲೀಸ್ ಕೇಸು ಕೊಟ್ಟರೆ ಹಾಕಿದ ಹಣವೂ ಸಿಗಲ್ಲ ಎನ್ನುವ ಭಯದಲ್ಲಿ ದೂರು ಕೊಡಲು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಪೊಲೀಸರು.

LEAVE A REPLY

Please enter your comment!
Please enter your name here