ಉಡುಪಿ: ಜಿಲ್ಲಾದ್ಯಾಂತ ವಿದ್ಯುತ್ ಸಂಪರ್ಕ ಪಡೆದ ಒಟ್ಟು ಸುಮಾರು 3.55 ಲಕ್ಷ ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಮಾಡುವ ಸಂಬಂಧ ಜಿಯೋ ಟ್ಯಾಗ್ ಸ್ಟಿಕರ್ ಅಳವಡಿಸಲಾಗಿದ್ದು, ಇದುವರೆಗೆ 70,971 ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುತ್ತದೆ. ಸಮೀಕ್ಷಾ ಕಾರ್ಯಕ್ಕಾಗಿ 3,158 ಗಣತಿದಾರರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಸೆ.22 ರಿಂದ ಸಮೀಕ್ಷೆಯನ್ನು ಪ್ರಾರಂಭಿಸಿದ್ದು, ಉಡುಪಿ ತಾಲೂಕಿನಲ್ಲಿ 844 ಬ್ಲಾಕ್ಗಳಲ್ಲಿ 7,497 ಮನೆಗಳಲ್ಲಿ 97,918 ಮಂದಿ, ಕುಂದಾಪುರ ತಾಲೂಕಿನಲ್ಲಿ 621 ಬ್ಲಾಕ್ಗಳಲ್ಲಿ 15,341 ಮನೆಗಳಲ್ಲಿ 65,791 ಮಂದಿ, ಕಾರ್ಕಳ ತಾಲೂಕಿನಲ್ಲಿ 531 ಬ್ಲಾಕ್ಗಳ 12,612 ಮನೆಗಳಲ್ಲಿ 57,740 ಮಂದಿ, ಕಾಪು ತಾಲೂಕಿನಲ್ಲಿ 403 ಬ್ಲಾಕ್ಗಳ 6,519 ಮನೆಗಳಲ್ಲಿ 43,834 ಮಂದಿ, ಹೆಬ್ರಿ ತಾಲೂಕಿನಲ್ಲಿ 121 ಬ್ಲಾಕ್ಗಳ 4703 ಮನೆಗಳಲ್ಲಿ 12,939 ಮಂದಿ, ಬ್ರಹ್ಮಾವರ ತಾಲೂಕಿನಲ್ಲಿ 465 ಬ್ಲಾಕ್ಗಳ 15,513 ಮನೆಗಳಲ್ಲಿ 51,139 ಮಂದಿ, ಬೈಂದೂರು ತಾಲೂಕಿನಲ್ಲಿ 246 ಬ್ಲಾಕ್ಗಳ 8,786 ಮನೆಗಳಲ್ಲಿ 26,410 ಮಂದಿ ಸಮೀಕ್ಷೆಗೊಳಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಗಣತಿದಾರರು ಜಿಲ್ಲೆಯ ನಾಗರೀಕ ಮನೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕುಟುಂಬದ ಪಡಿತರ ಚೀಟಿ, ಆಧಾರ್ ಸಂಖ್ಯೆ, ವಿಶೇಷ ಚೇತನರು ಕುಟುಂಬದಲ್ಲಿದ್ದರೆ ಯು.ಡಿ.ಐ.ಡಿ ಸಂಖ್ಯೆಯನ್ನು ಗಣತಿದಾರರಿಗೆ ನೀಡಬೇಕಾಗಿರುತ್ತದೆ. ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ಗಳು ಮೊಬೈಲ್ ನಂಬರ್ಗಳಿಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಒಂದು ವೇಳೆ ಆ ಸದಸ್ಯರು ಮನೆಯಲ್ಲಿಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರ ಫೋನ್ ಮೂಲಕ ಒ.ಟಿ.ಪಿ. ಸಂಖ್ಯೆಯನ್ನು ನೀಡಬೇಕು.
ಯಡಮೊಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ ಮಲ್ಲೇಶ್, ತಮಗೆ ವಹಿಸಿದ್ದ ಸಮೀಕ್ಷಾ ಕರ್ತವ್ಯವನ್ನು ಕೇವಲ ಮೂರು ದಿನಗಳ ಒಳಗಾಗಿ ಪೂರ್ಣಗೊಳಿಸಿದ್ದು, ಅವರಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಭಿನಂದನೆ ಸಲ್ಲಿಸಿದ್ದಾರೆ.