ಸೈನಿಕನಾಗುವ ಕನಸು ಕಂಡಿದ್ದ ಯುವಕನ ಸಾವಿನ ಸುತ್ತ ಅನುಮಾನದ ಹುತ್ತ…!

0
214

ಮೂಡುಬಿದಿರೆ : ಭಾರತೀಯ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬ ಅದಮ್ಯ ಕನಸನ್ನು ಹೃದಯದಲ್ಲಿ ಇಟ್ಟುಕೊಂಡಿದ್ದ , ಅಳ್ವಾಸ್ ಕಾಲೇಜಿನ ವಿದ್ಯಾರ್ಥಿ ಓಂಕಾರ್ ಪೂಜಾರಿ (20) ಅವರು ಕಳೆದ ಒಂದು ವಾರದಿಂದ ಸಾವು–ಬದುಕಿನ ನಡುವೆ ಹೋರಾಡಿ, ಸೋಮವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಸಾರ್ವಜನಿಕ ವಲಯದಲ್ಲಿ ಹಲವಾರು ಸಂಶಯಗಳಿಗೆ ಕಾರಣವಾಗಿದೆ.

ಜನವರಿ 4ರಂದು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಓಂಕಾರ್ ಅವರನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಲಿವರ್ ಸಂಪೂರ್ಣವಾಗಿ ವೈಫಲ್ಯಗೊಂಡಿರುವುದು ದೃಢಪಟ್ಟಿತ್ತು.

ಓಂಕಾರ್ ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚ ಅಗತ್ಯವಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಸಮಾಜಸೇವಕರು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದರು. ಎರಡು ದಿನಗಳ ಕಾಲ ವೆಂಟಿಲೇಟರ್ ಸಹಾಯದೊಂದಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು. ಒಂದು ಹಂತದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಂತೆ ಭಾಸವಾದರೂ, ಸೋಮವಾರ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಓಂಕಾರ್ ವಿಧಿವಶರಾದರು.

ಓಂಕಾರ್ ಪೂಜಾರಿ ಸದಾ ಭಾರತೀಯ ಸೇನೆಗೆ ಸೇರಬೇಕೆಂಬ ಗುರಿ ಹೊಂದಿದ್ದರು. ದೈಹಿಕ ಕಸರತ್ತು ಹಾಗೂ ಓದಿನಲ್ಲಿ ಮುಂಚೂಣಿಯಲ್ಲಿದ್ದ ಯುವಕನಿಗೆ ಅಚಾನಕ್ ತೀವ್ರ ಹೊಟ್ಟೆನೋವು ಕಾಣಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಮನೆಯ ಆಹಾರದಲ್ಲಿ ಏನಾದರೂ ವ್ಯತ್ಯಾಸವಾಗಿತ್ತೇ? ಕುಟುಂಬದಲ್ಲಿ ಯಾವುದೇ ಆಂತರಿಕ ಕಲಹವಿತ್ತೇ? ಅಥವಾ ಇನ್ನಾವುದೇ ಕಾರಣಗಳಿಂದ ಈ ದುರ್ಘಟನೆ ಸಂಭವಿಸಿತ್ತೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಈ ಎಲ್ಲಾ ಸಂಶಯಗಳಿಗೆ ಸ್ಪಷ್ಟತೆ ಸಿಗಬೇಕಾದರೆ ಶವ ಮಹಜರು (ಪೋಸ್ಟ್‌ಮಾರ್ಟಂ) ವರದಿ ಪೊಲೀಸರ ಕೈ ಸೇರಬೇಕಾಗಿದೆ. ವರದಿ ಬಂದ ನಂತರವೇ ಓಂಕಾರ್ ಅವರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here