ಮಂಗಳೂರು: ರಾಜ್ಯದಲ್ಲಿರುವ 2-3 ಅತ್ಯುತ್ತಮ ಪ್ಯಾಲಿಟಿವ್ ಕೇರ್ ಕೇಂದ್ರಗಳಲ್ಲಿ ತಪಸ್ಯಾ ಫೌಂಡೇಶನ್ ಒಂದು ಅತ್ಯುನ್ನತ ಮಟ್ಟದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯಾಗಿದೆ. ಮಾನವೀಯತೆ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಬದ್ಧತೆಯೊಂದಿಗೆ ಈ ಸಂಸ್ಥೆ ಜನರ ಮನಗಳಲ್ಲಿ ಒಂದು ವಿಶೇಷ ಸ್ಥಾನ ಗಳಿಸಿದೆ ಎಂದು ವಿಧಾನಸಭಾ ಅಧ್ಯಕ್ಷ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ತಪಸ್ಯಾ ಫೌಂಡೇಶನ್ , ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಶನ್ , ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ವತಿಯಿಂದ ಕುರ್ನಾಡು ಇನ್ಫೋಸಿಸ್ ಪಕ್ಕದ ಮುಡಿಪು ಮಿತ್ತಕೋಡಿ ಸಮೀಪ ನಿರ್ಮಿಸಲಾದ ಲಯನ್ಸ್ ಮಕ್ಕಳ ಕ್ಯಾನ್ಸರ್ ಕೇರ್ ಯುನಿಟ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂತಹ ಸೇವಾ ಚಟುವಟಿಕೆಗಳು ಇನ್ನಷ್ಟು ವಿಸ್ತಾರವಾಗಲು, ಸಮಾಜದ ಎಲ್ಲ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ಎಲ್ಲರ ಸಹಕಾರ ದೊರೆತರೆ, ತಪಸ್ಯಾ ಫೌಂಡೇಶನ್ ದೇಶದಾದ್ಯಂತ ಮಾದರಿಯಾದ ಪ್ಯಾಲಿಟಿವ್ ಕೇರ್ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಕರಾವಳಿ ಕರ್ನಾಟಕದ ಮಣ್ಣಿನಲ್ಲಿ ಸಂತೋಷ, ಪ್ರೀತಿ ಮತ್ತು ತನ್ನತನ ಕಲಿಯುವ ವಾತಾವರಣ ನಿರ್ಮಿಸಲು ಲಯನ್ ಸಬಿತಾ ಶೆಟ್ಟಿ ಹಾಗೂ ರಮಾನಾಥ ಶೆಟ್ಟಿ ಅವರಂತಹ ಸೇವಾ ಮನೋಭಾವಿ ನಾಯಕರ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ. ಅವರು ಕೇವಲ ಸೇವೆ ಮಾಡುತ್ತಿಲ್ಲ, ನೋವಿನಲ್ಲಿರುವವರ ಕಣ್ಣೀರನ್ನು ಒರೆಸಿ, ಬದುಕಿನಲ್ಲೇ ನೆಮ್ಮದಿ ಮತ್ತು ಸಂತೋಷದ ಹಾದಿ ತೋರಿಸುತ್ತಿದ್ದಾರೆ. ಜಿಲ್ಲೆಯಲ್ಲೇ ಮಾನವೀಯತೆ ಕೇಂದ್ರ ಎಂದು ಗುರುತಿಸಿಕೊಂಡಿರುವ ಈ ತಪಸ್ಯಾ ಪ್ಯಾಲಿಟಿವ್ ಕೇರ್ ಸೆಂಟರ್ ನಮ್ಮೆಲ್ಲರಿಗೂ ದೊಡ್ಡ ಮಟ್ಟದ ಇನ್ಸ್ಪಿರೇಶನ್ ಆಗಿದೆ. ಇಂತಹ ಸೇವಾ ಕೇಂದ್ರಗಳು ಕೇವಲ ರೋಗಿಗಳಿಗಾಗಿ ಅಲ್ಲ, ಅದು ಮಾನವೀಯತೆಯ ಪಾಠ ಕಲಿಸುವ ಜೀವಂತ ಪಾಠಶಾಲೆಗಳಾಗಿವೆ.
ನಾನು ಮನವಿ ಮಾಡಿಕೊಳ್ಳುತ್ತೇನೆ ನಮ್ಮ ಮನೆಗಳಲ್ಲಿ ಸಂತೋಷದ ಕ್ಷಣಗಳನ್ನು ಆಚರಿಸುವಾಗ, ಇಂತಹ ಕೇಂದ್ರಗಳನ್ನು ನೆನೆದು ಇಲ್ಲಿ ಕೂಡಾ ಹಂಚಿಕೊಳ್ಳುವ ಮನೋಭಾವ ಬೆಳೆಸೋಣ. ಅದುವೇ ನಿಜವಾದ ಮಾನವೀಯತೆಯ ಸೇವೆ. ಕಟ್ಟಡವನ್ನು ಉದ್ಘಾಟಿಸಿದ ಲಯನ್ಸ್ ಇಂಟರ್ ನ್ಯಾಷನಲ್ , ಎಲ್ ಸಿಐಎಫ್ ಕಾನ್ಸಿಟ್ಯೂಷನಲ್ ಏರಿಯಾ ನಾಯಕ ಹಾಗೂ ಮಾಜಿ ಅಂತರಾಷ್ಟೀಯ ನಿರ್ದೇಶಕ ವಂಶಿಧರ್ ಬಾಬು ಮಾತನಾಡಿ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಅತ್ಯಂತ ವಿಶೇಷ ಯೋಜನೆಗಳಲ್ಲಿ ಒಂದು, ಸಂಸ್ಥೆಯ ಎಂಟು ಜಾಗತಿಕ ಸೇವಾ ಉದ್ದೇಶಗಳಲ್ಲಿ ಪ್ರಮುಖವಾದ ಬಾಲ್ಯ ಕ್ಯಾನ್ಸರ್ ಕುರಿತ ಯೋಜನೆಯಾಗಿದೆ. ಇದುವರೆಗೆ ದೃಷ್ಟಿ ಸಂಬಂಧಿತ ಸೇವಾ ಕಾರ್ಯಕ್ರಮಗಳಲ್ಲಿ ಹೆಚ್ಚು ಒತ್ತು ನೀಡಿದ್ದರೂ, ಈಗ ಈ ಯೋಜನೆಯ ಮೂಲಕ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಮಕ್ಕಳ ಜೀವನಕ್ಕೆ ಬೆಳಕು ನೀಡುವ ಮಹತ್ತಾದ ಹೆಜ್ಜೆ ಇಡಲಾಗಿದೆ. ಸ್ವಪ್ನಗಳ ಸೌಂದರ್ಯವನ್ನು ನಂಬುವವರಿಗೇ ಭವಿಷ್ಯ ಸೇರಿದೆ ಎಂಬ ಆಲೋಚನೆಯನ್ನು ಶ್ರೀಮತಿ ಸಬಿತಾ ಶೆಟ್ಟಿ ತಮ್ಮ ಕಾರ್ಯದ ಮೂಲಕ ಜೀವಂತಗೊಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಪ್ರತಿ ವರ್ಷ 50 ರಿಂದ 60 ಮಿಲಿಯನ್ ಡಾಲರ್‌ಗಳವರೆಗೆ ಮಾನವೀಯ ಸೇವಾ ಯೋಜನೆಗಳಿಗೆ ಹೂಡಿಕೆ ಮಾಡುತ್ತದೆ.
ಪ್ರತಿ ಡಾಲರ್, ಪ್ರತಿ ರೂಪಾಯಿಯೂ ನೇರವಾಗಿ ಸೇವೆಗೆ ಬಳಸಲಾಗುತ್ತದೆ . ಆಡಳಿತ ಖರ್ಚುಗಳಿಗೆಲ್ಲಾ ಬೇಡ. ಸಂಗ್ರಹಿಸುವ ಪ್ರತಿಯೊಂದು ರೂಪಾಯಿಯೂ ಸೇವೆಗೆ ಮೀಸಲಾಗಿದೆ ಎಂಬುದು ಹೆಮ್ಮೆ. ನಡೆಸಿದ ಸಂಶೋಧನೆಯ ಪ್ರಕಾರ, ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು 4.1 ಲಕ್ಷ ಹೊಸ ಬಾಲ್ಯ ಕ್ಯಾನ್ಸರ್ ಪ್ರಕರಣಗಳು ಕಾಣಿಸುತ್ತವೆ. ಈ ಮಕ್ಕಳಲ್ಲಿ ಸುಮಾರು 90% ಮಂದಿ ಮಧ್ಯಮ ಮತ್ತು ಅಲ್ಪ ಆದಾಯದ ಕುಟುಂಬಗಳಿಂದ ಬಂದವರಾಗಿದ್ದಾರೆ. ಈ ಯೋಜನೆಯ ಉದ್ದೇಶ ಕೇವಲ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಜಾಗೃತಿ ಮೂಡಿಸುವುದು, ಮಕ್ಕಳ ಶಿಕ್ಷಣ ಹಾಗೂ ಪೋಷಕರ ಜೀವನೋಪಾಯ ಕಳೆದುಹೋಗದಂತೆ ನೋಡಿಕೊಳ್ಳುವುದು, ಹಾಗೂ ಮಕ್ಕಳಿಗೆ ಅವರ ಬಾಲ್ಯವನ್ನು ಕಳೆದುಕೊಳ್ಳದಂತೆ ಸಹಾಯ ಮಾಡುವುದಾಗಿದೆ.
ಇದರ ಭಾಗವಾಗಿ, ಗರ್ಭಕಂಠ (ಸರ್ವೈಕಲ್) ಕ್ಯಾನ್ಸರ್ ತಡೆಗಟ್ಟುವ ಪೈಲಟ್ ಪ್ರಾಜೆಕ್ಟ್ ಆರಂಭಿಸಲಾಗಿದೆ. ಈ ಯೋಜನೆಯಡಿ ಸುಮಾರು ರೂ.೩ ಕೋಟಿ ಮೌಲ್ಯದ ಲಸಿಕೆಗಳನ್ನು ಖರೀದಿಸಿ ಮಕ್ಕಳಿಗೆ ಹಾಗೂ ಯುವತಿಯರಿಗೆ ನೀಡುವ ಉದ್ದೇಶವಿದೆ. ಭವಿಷ್ಯದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸಂಪೂರ್ಣ ಭಾರತಮಟ್ಟಕ್ಕೆ ವಿಸ್ತರಿಸುವ ದೃಷ್ಟಿಯಿದೆ, ಹೆಚ್ಚಿನ ಕುಟುಂಬಗಳಿಗೆ ಆಶಾಕಿರಣ, ಜಾಗೃತಿ ಮತ್ತು ರಕ್ಷಣೆ ದೊರೆಯುವಂತಾಗಲಿ ಎಂದರು. ಜನವರಿ 9 ರಿಂದ 11 ರವರೆಗೆ ನಡೆಯಲಿರುವ ಮಂಗಳೂರು ಬೀಚ್ ಫೆಸ್ಟಿವಲ್ ಮತ್ತು ಮಂಗಳೂರು ಟ್ರಯಾಥ್ಲಾನ್ 2026 ರ ರ‍್ಟನ್ ರೈಸರ್ ಕಾರ್ಯಕ್ರಮವೂ ನಡೆಯಲಿದೆ. ಈ ಉತ್ಸವವು ಮಂಗಳೂರು ನಗರದ ಸಾಂಸ್ಕೃತಿಕ, ಕ್ರೀಡಾ ಹಾಗೂ ಉದ್ಯಮಶೀಲ ಆತ್ಮವನ್ನು ಜಾಗತಿಕ ವೇದಿಕೆಯಲ್ಲಿ ಪ್ರಚಾರಪಡಿಸವ ಉದ್ದೇಶವನ್ನೇ ಹೊಂದಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಪಸ್ಯಾ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟೀ ಸಬಿತಾ ಶೆಟ್ಟಿ ವಹಿಸಿದ್ದರು.
ಡಾ. ಚಂದ್ರ ಪೈ, ಡಾ ಹರ್ಷಪ್ರಸಾದ್, ಲಯನ್ಸ್ ನ ದ್ವಿತೀಯ ಉಪರಾಜ್ಯಪಾಲ ಗೋವರ್ದನ್ ಶೆಟ್ಟಿ, ಪ್ರಥಮ ಉಪರಾಜ್ಯಪಾಲರಾದ ತಾರನಾಥ್ ಹೆಚ್.ಎಂ ಕೊಪ್ಪ, ೩೧೭ಡಿ ಲಯನ್ಸ್ ರಾಜ್ಯಪಾಲ ಅರವಿಂದ್ ಶೆಣೈ, ಯೆನೆಪೋಯ ಪರಿಗಣಿಸಲ್ಪಟ್ಟ ವಿ.ವಿ.ಯ ಕುಲಪತಿ ಡಾ. ವಿಜಯ್ ಕುಮಾರ್, ಎಲ್ ಸಿ ಎಫ್ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, 317 ಡಿ ಎಲ್ ಸಿಎಫ್ ಕಾರ್ಡಿನೇಟರ್ ಸಂಜಿತ್ ಕುಮಾರ್ ಶೆಟ್ಟಿ, ಡಾ. ಕೃಷ್ಣ ಶರಣ್, ಉಪಸ್ಥಿತರಿದ್ದರು. ಇದೇ ಸಂದರ್ಭ ವೈದ್ಯರುಗಳನ್ನು ಹಾಗೂ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರನ್ನು ಸನ್ಮಾನಿಸಲಾಯಿತು.
`ಆಪ್ತೆಯನ್ನು ಕಳೆದುಕೊಂಡ ನೆನಪಲ್ಲಿ ನಿರ್ಮಾಣಗೊಂಡ ತಪಸ್ಯಾ ಫೌಂಡೇಶನ್’
ತಪಸ್ಯಾ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟೀ ಸಬಿತಾ ಶೆಟ್ಟಿ ಮಾತನಾಡಿ, ಪ್ರಥಮವಾಗಿ ನಾನು ಈ ಸ್ಥಳಕ್ಕೆ ಬಂದಾಗ, ಇದು ಕಾಡಿನಂತಿದ್ದ ಪ್ರದೇಶವಾಗಿತ್ತು. ಆದರೆ ನನ್ನ ಮನಸ್ಸಿನಲ್ಲಿ ಒಂದು ಕನಸಿತ್ತು ಒಂದು ದಿನ ಇಲ್ಲಿ ನೋವಿನಲ್ಲಿರುವವರಿಗೆ ನೆಮ್ಮದಿ ನೀಡುವ ಆಶ್ರಯ ನಿರ್ಮಾಣವಾಗಬೇಕು ಎಂಬುದು. ಆ ದೂರದೃಷ್ಟಿಯೇ ಇಂದಿನ ಈ ಲಯನ್ಸ್ ಬಾಲ್ಯದ ಕ್ಯಾನ್ಸರ್ ಪ್ಯಾಲಿಟಿವ್ ಕೇರ್ ಸೆಂಟರ್ ಆಗಿ ರೂಪುಗೊಂಡಿದೆ. ಈ ಕನಸು ಕೇವಲ ನನ್ನದೇ ಅಲ್ಲ. ಕನಸನ್ನು ನಂಬಿದ, ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಜನರು ಒಟ್ಟುಗೂಡಿದಾಗ, ಸೇವೆ ಎಲ್ಲಾ ಗಡಿಗಳನ್ನು ಮೀರಿ ಒಂದಾಗಿ ಬೆಸೆದು ಕೆಲಸ ಮಾಡುವ ಶಕ್ತಿಯುಳ್ಳ ಚಳವಳಿಯಾಗಿದೆ.ನನ್ನ ಅತ್ಯಂತ ಆಪ್ತ ಸ್ನೇಹಿತೆಯನ್ನು ಕಳೆದುಕೊಂಡ ನೋವಿನ ಕ್ಷಣವೇ ತಪಸ್ಯಾ ಫೌಂಡೇಶನ್ ಹುಟ್ಟಿಗೆ ಕಾರಣವಾಯಿತು.
2019ರಲ್ಲಿ ಸ್ಪಷ್ಟ ದೃಷ್ಟಿಯೊಂದಿಗೆ ನಾವು ಈ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ ಕ್ಯಾನ್ಸರ್ ಪೀಡಿತ ಮಕ್ಕಳ ಕುಟುಂಬದ ಪಕ್ಕದಲ್ಲಿ ನಿಲ್ಲುವ ನಿಸ್ವಾರ್ಥ ಉದ್ದೇಶದಿಂದ. ಅದೇ ವರ್ಷದಲ್ಲಿ ನಾನು ಕರುಣಾಶ್ರಯ ಬೆಂಗಳೂರುಗೆ ಭೇಟಿ ನೀಡಿದಾಗ ಅದರ ಸೇವಾ ಮಾದರಿ ನನ್ನ ಮನಸ್ಸಿಗೆ ಆಳವಾದ ಪ್ರಭಾವ ಬೀರಿತು. ಆಗಲೇ ನಾನು ನಿರ್ಧರಿಸಿದೆ. ನಮ್ಮ ಕೇಂದ್ರ ಕೇವಲ ನಾಲ್ಕು ಗೋಡೆಗಳ ಆಸ್ಪತ್ರೆಯಾಗಬಾರದು; ಅದು ಸಹಾನುಭೂತಿ ಮತ್ತು ಮಾನವೀಯತೆಯ ವಾತಾವರಣ ಹೊಂದಿದ ಮನೆ ಆಗಿರಬೇಕು ಎಂದು. ಇಂದು ನಮ್ಮ ಕಟ್ಟಡದ ವಿನ್ಯಾಸದಲ್ಲಿಯೂ ಅದೇ ದೃಷ್ಟಿ ಕಾಣುತ್ತದೆ . ಶಾಂತ ವಾಸ್ತುಶಿಲ್ಪ, ಹಸಿರಿನಿಂದ ಸುತ್ತಿರುವ ವಾತಾವರಣ, ಧ್ಯಾನ ಕೋಣೆಗಳು ಮತ್ತು ಆಪ್ತ ಆರೈಕೆಯ ಸೌಕರ್ಯಗಳು, ಎಲ್ಲವೂ ನೆಮ್ಮದಿ ಮತ್ತು ಪ್ರೀತಿಯ ಸಂಕೇತಗಳಾಗಿವೆ.ಈ ಪ್ರಯಾಣದಲ್ಲಿ ಹಲವರು ನಮ್ಮ ಜೊತೆ ನಿಂತಿದ್ದಾರೆ .
ಕರ್ನಾಟಕ ಬ್ಯಾಂಕ್ ಮಾಜಿ ಸಿಇಒ ಅನಂತಕೃಷ್ಣ ಭಟ್,ಸುಧಾ ಅರಮನೆ, ನನ್ನ ಜೀವನಸಂಗಾತ ರಮಾನಾಥ ಶೆಟ್ಟಿ, ಇವರ ಪ್ರೋತ್ಸಾಹ ನಮ್ಮ ನಂಬಿಕೆಗೆ ಬಲ ನೀಡಿದೆ. ಅನಿಲ್ ಯು.ಪಿ, ವಿಶ್ವಾಸ್ ಯು.ಎಸ್, ರವಿಚಂದ್ರ ಹೆಗ್ಡೆ, ಸಿ.ಎ. ನಾರಾಯಣ ಶೆಟ್ಟಿ, ಮೋಹನ್ ಶೆಟ್ಟಿ, ಡಾ. ಆಶಾ ಜ್ಯೋತಿ ರೈ, ಪದ್ಮಿನಿ ಪ್ರಶಾಂತ್ ರಾವ್ ಇವರ ತ್ಯಾಗದ ಬೆಂಬಲ ಅಪಾರ. ಮಾಜಿ ಟ್ರಸ್ಟಿಗಳಾದ ಸುಧಾ ರಮ ರೈ, ತೀರ್ಥರಾಮ್ ವಳಲಂಬೆ, ಡಾ. ಹರಿಪ್ರಸಾದ್ ಬೆಳ್ಳಿಪ್ಪಾಡಿ ಅವರು ನಂಬಿಕೆಯ ಅಡಿಪಾಯ ಹಾಕಿದರು. 2019ರಲ್ಲಿ ಆರೋಗ್ಯ ಸಚಿವರಾಗಿದ್ದ ಯು.ಟಿ. ಖಾದರ್ ಅವರು ನಮ್ಮ ಕೇಂದ್ರಕ್ಕೆ ಪ್ರವೇಶ ರಸ್ತೆಯನ್ನು ಮಂಜೂರು ಮಾಡಿ ಸಹಕಾರ ನೀಡಿದದ್ದು ಅತ್ಯಂತ ಮಹತ್ವದ ಕ್ಷಣ.ನಂತರ ಬಂದ ಕೋವಿಡ್-19 ಸಮಯದಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ನಿಂತರೂ, ನಮ್ಮ ಧೈರ್ಯ ನಿಲ್ಲಲಿಲ್ಲ. ಅಂದು ಲಯನ್ಸ್ ಗವರ್ನರ್ ಆಗಿದ್ದ ಲಯನ್ ವಸಂತ್ ಶೆಟ್ಟಿ ಅವರು ಕೆಎಂಸಿ ವಾರ್ಡ್ಗೆ ಭೇಟಿ ನೀಡಿ ನಮ್ಮ ಯೋಜನೆಗೆ ಪ್ರೋತ್ಸಾಹ ನೀಡಿದರು ಮತ್ತು ಲಯನ್ಸ್ ಇಂಟರ್‌ನ್ಯಾಷನಲ್‌ನಿಂದ ಅನುದಾನ ಪಡೆಯಲು ಸಹಕರಿಸಿದರು.
ಸುಪ್ರಜಿತ್ ಫೌಂಡೇಶನ್ ಕೂಡ ಕೋವಿಡ್ ನಂತರದ ಅವಧಿಯಲ್ಲಿ ಮಹತ್ವದ ಸಹಾಯ ನೀಡಿತು. ಶೌರ್ಯ ಅನ್ನುವ ಮ್ಯಾರಥಾನ್ ಆಯೋಜಿಸಿ ರೂ. 1.6 ಲಕ್ಷ ಸಂಗ್ರಹಿಸಲಾಯಿತು. ಇದು ನಮ್ಮ ಮೊದಲ ಫಂಡ್‌ರೈಸಿAಗ್ ಪ್ರಯತ್ನವಾಗಿತ್ತು. 2020ರಲ್ಲಿ ಯೆನೆಪೋಯ ಸಂಸ್ಥೆ, ರ್ಹಾದ್ ಮತ್ತು ಅಬ್ದುಲ್ಲಾ ಕುಂಜ್ ಅವರ ಸಹಕಾರದಿಂದ ನರಿಂಗಾನ ಆಯುರ್ವೇದ ಆಸ್ಪತ್ರೆಯ ಒಂದು ವಾರ್ಡನ್ನು ನೀಡುವ ಔದಾರ್ಯ ತೋರಿದರು. ಒಂದು ವರ್ಷ ಸಂಪೂರ್ಣ ಉಚಿತ ಆರೈಕೆ ನೀಡುವ ಅವಕಾಶ ದೊರಕಿತ್ತು. ನಂತರ ನಾವು ನಮ್ಮ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡೆವು. ಡಾ. ಪ್ರಜ್ಞಾ ಕಿಣಿ ನರ್ಸ್ಗಳಿಗೆ ತರಬೇತಿ ನೀಡಿದರು. ಡಾ. ವಿಜಯಕುಮಾರ್ ಕುಲಪತಿ ರೂ. 1 ಲಕ್ಷ ನೀಡುವ ಮೂಲಕ ನಮ್ಮ ಮನೋಬಲ ಹೆಚ್ಚಿಸಿದರು. ಈವರೆಗೆ 140 ಮಕ್ಕಳಿಗೆ ಆರೈಕೆ ನೀಡಲಾಗಿದೆ . ಆರೈಕೆ, ಗೌರವ ಮತ್ತು ಘನತೆ ಎಲ್ಲರ ಹಕ್ಕು ಎನ್ನುವ ನಂಬಿಕೆಯಿಂದ ನಾವು ಕೆಲಸ ಮಾಡುತ್ತಿದ್ದೇವೆ. ಪ್ಯಾಲಿಟಿವ್ ಕೇರ್ ಸೇವೆ ಈಗ ವಯಸ್ಕರಿಗೂ ವಿಸ್ತರಿಸಲಾಗಿದೆ. ಕ್ಯಾ. ಬೃಜೇಶ್ ಚೌಟ ಮತ್ತು ಒಖPಐ, ಟಾಟಾ ಮುಂಬೈ ಮ್ಯಾರಥಾನ್, ಮಂಗಳೂರು ಟ್ರಯಾಥ್ಲಾನ್, ಬೀಚ್ ಫೆಸ್ಟಿವಲ್ ಎಲ್ಲರೂ ನಮ್ಮ ಜೊತೆ ನಿಂತಿದ್ದಾರೆ. 13 ಬೆಡ್‌ಗಳ ವಿಸ್ತರಣೆಗೆ ರೂ. 10 ಲಕ್ಷ ಅಗತ್ಯವಿದ್ದು, ಅದಕ್ಕಾಗಿ ನಾವು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಮ್ಯಾರಥಾನ್ ಮತ್ತು ಫಂಡ್ ರೈಸಿಗ್ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಕರ್ನಾಟಕ ಯುವಜನ ಮತ್ತು ಕ್ರೀಡಾ ಇಲಾಖೆ ನಮ್ಮ ಪ್ರಯತ್ನಗಳಿಗೆ ನಿಸ್ವಾರ್ಥ ಬೆಂಬಲ ನೀಡಿದೆ. ಕ್ರೀಡಾಪಟುಗಳನ್ನು ಒಟ್ಟುಗೂಡಿಸಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಪ್ರಯತ್ನ ಮಾಡಿದ್ದೇವೆ. ಏಕೆಂದರೆ ಸೇವೆ ಕೇವಲ ದೇಹದ ಚಿಕಿತ್ಸೆ ಅಲ್ಲ, ಅದು ಮನಸ್ಸಿನ ಚೈತನ್ಯವನ್ನು ಹೆಚ್ಚಿಸುವ ಕ್ರಿಯೆ. ಇದು ಕೇವಲ ಒಂದು ಕಟ್ಟಡವಲ್ಲ. ಇದು ಸಹಾನುಭೂತಿಯ, ಮಾನವೀಯತೆಯ ಕಟ್ಟಡ. ಇಲ್ಲಿ ಪ್ರತಿಯೊಂದು ನಗು, ಪ್ರತಿಯೊಂದು ಕಣ್ಣೀರು, ಪ್ರತಿಯೊಂದು ಸ್ಪರ್ಶ, ಜೀವದ ಅರ್ಥವನ್ನು ಮತ್ತೆ ಪರಿಚಯಿಸುತ್ತದೆ. ತಪಸ್ಯಾ ಫೌಂಡೇಶನ್‌ನ ಈ ಪಯಣಕ್ಕೆ ಕೈಜೋಡಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ನಾವು ಸೇರಿ ಮಾಡಿದ ಈ ಕೆಲಸ ಒಂದು ಸೇವಾ ಚಟುವಟಿಕೆ ಮಾತ್ರವಲ್ಲ. ಅದು ಬದುಕಿನ ಹೋರಾಟದಲ್ಲಿರುವವರಿಗೆ ನಂಬಿಕೆಯ ಬೆಳಕು ಎಂದಿದ್ದಾರೆ.

