ಉಡುಪಿ: ಜೀವ ವಿಮಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಂಪೆನಿಯ ಉಡುಪಿ ಶಾಖೆ ಪದ್ಮವಿಭೂಷಣ, ಸರ್ ರತನ್ ಟಾಟಾ ಅವರ ಹುಟ್ಟುಹಬ್ಬದ ಸಲುವಾಗಿ ರಕ್ತದಾನ ಶಿಬಿರವನ್ನು ಶುಕ್ರವಾರ ಆಯೋಜಿಸಿತ್ತು. ವಿಮಾ ಪಾಲಿಸಿಗಳ ಮೂಲಕ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುತ್ತಿರುವ ಕಂಪೆನಿಯು ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಧ್ಯೇಯವಾಕ್ಯದಡಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಿ ಸಾಮಾಜಿಕ ಬದ್ಧತೆಯನ್ನು ಅಭಿವ್ಯಕ್ತಿಗೊಳಿಸಿತು.
ಕುಂದಾಪುರದ ರೆಡ್ ಕ್ರಾಸ್ ಸೊಸೈಟಿ ಅವರ ಸಹಯೋಗದಲ್ಲಿ ನಡೆದ ಈ ರಕ್ತದಾನ ಶಿಬಿರಕ್ಕೆ ರೆಡ್ ಕ್ರಾಸ್ ಕುಂದಾಪುರದ ಅಧ್ಯಕ್ಷರಾದ ಜಯಕರ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಸಮಿತಿಯ ಸದಸ್ಯೆ ಆಶಾ ಶೆಟ್ಟಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ “ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ ದಾನ, ಕಳೆದ ಮೂರು ತಿಂಗಳುಗಳಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆ ಇದೆ, ಇಂತಹ ಶಿಬಿರಗಳ ಮೂಲಕ ರಕ್ತದ ಕೊರತೆ ನೀಗುವ ಮಹತ್ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಟಾಟಾ ಗ್ರೂಪ್ ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಅವರು ಕೊಂಡಾಡಿದರು.
ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಂಪೆನಿಯ SDOA ಸತ್ಯನಾರಾಯಣ ನಾಯಕ್, ADOA ಪ್ರತೀಕ್ ಶೆಟ್ಟಿ, ಬ್ರಾಂಚ್ ಮ್ಯಾನೇಜರ್ ಆಶ್ರಯ ಆಚಾರ್ಯ, ಅಸಿಸ್ಟಂಟ್ ಮ್ಯಾನೇಜರ್ ಕಿರಣ್ ಶೆಟ್ಟಿ, ಸಂದೀಪ್ ನಾಯಕ್ ಉಪಸ್ಥಿತರಿದ್ದರು.
ಶಾಖೆಯ ಚೀಫ್ ಬಿಸಿನೆಸ್ ಅಸೋಸಿಯೇಟ್ ರಾಜೇಶ್ ಡಿ . ಶೆಣೈ ಸ್ವಾಗತಿಸಿದರು. MDRT ಶಶಿಧರ ಹೆಮ್ಮಾಡಿ ವಂದನಾರ್ಪಣೆಗೈದರು.
ಶಾಖೆಯ ಲೈಫ್ ಪ್ಲಾನರ್ ಗಳು, ಲೀಡರ್ ಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ರಕ್ತದಾನ ಮಾಡಿದರು.

