ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಪಾವತಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಯೂನಿಯನ್ ಬ್ಯಾಂಕ್ನ ನಕಲಿ ಸೀಲು ಬಳಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರಸಭೆ ಪೌರಾಯುಕ್ತರಾದ ಮಹಾಂತೇಶ್ ಹಂಗರಗಿ ಅವರು ತೆರಿಗೆ ಪಾವತಿಗಳ ಮರುಪರಿಶೀಲನೆ ನಡೆಸುತ್ತಿದ್ದಾಗ ಈ ಜಾಲ ಪತ್ತೆಯಾಗಿದೆ. ಜನವರಿ 28ರಂದು ಬ್ಯಾಂಕ್ ಸೀಲು ಹೊಂದಿದ್ದ ಚಲನ್ ದಾಖಲೆಯಲ್ಲಿದ್ದರೂ, ಬ್ಯಾಂಕ್ ಸ್ಟೇಟ್ಮೆಂಟ್ನಲ್ಲಿ ಆ ಹಣ ಜಮೆಯಾಗಿರಲಿಲ್ಲ. ಫೆಬ್ರವರಿ 4ರಂದು ಮತ್ತೆ ತಪಾಸಣೆ ನಡೆಸಿದಾಗ, ಒಂದೇ ಚಲನ್ ಸಂಖ್ಯೆಯನ್ನಿಟ್ಟುಕೊಂಡು ಬೇರೆ ಬೇರೆ ದಿನಾಂಕದ ನಕಲಿ ಸೀಲುಗಳನ್ನು ಒತ್ತಿರುವುದು ಪತ್ತೆಯಾಗಿದೆ.
ಪೌರಾಯುಕ್ತರ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈ ಹಗರಣದ ಹಿಂದೆ ನಗರಸಭೆಯ ಒಳಗಿನವರ ಕೈವಾಡವಿದೆಯೇ ಅಥವಾ ಹೊರಗಿನ ಏಜೆಂಟ್ಗಳ ಸಂಚಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.

