ಬೆಂಗಳೂರು: ಮಹಿಳೆ ಹಾಗೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಆದ್ರೆ, ಅಚ್ಚರಿ ಎಂಬಂತೆ 52 ವರ್ಷದ ಮಹಿಳಾ ಟೀಚರ್ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಅಪರೂಪದ ಘಟನೆ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಹಿಳೆ ತನ್ನ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದಳು. ಆದ್ರೆ ಹೈಕೋರ್ಟ್ ಮಹಿಳೆ ಮೇಲಿನ ಪೋಕ್ಸೋ ಕೇಸ್ ರದ್ದುಗೊಳಿಸಲು ನಿರಾಕರಿಸಿದೆ.
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ 52 ವರ್ಷದ ಮಹಿಳೆ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಘಟನೆ ನಡೆದು ನಾಲ್ಕು ವರ್ಷಗಳ ಬಳಿಕ ಮಹಿಳೆ ಮೇಲೆ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಮಹಿಳೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ಮಹಿಳೆಗೆ ಪೋಕ್ಸೋ ಕಾಯ್ದೆ ಅನ್ವಯವಾಗುವುದಿಲ್ಲ. ಯಾಕಂದ್ರೆ ಮಹಿಳೆ, ಬಾಲಕನ ಮೇಲೆ ಅತ್ಯಾಚಾರ ಎಸಗಲು ಸಾಧ್ಯವಿಲ್ಲವೆಂದು ಮಹಿಳೆ ಪರ ವಕೀಲ ವಾದ ಮಂಡಿಸಿದರು. ಇಂದು (ಆಗಸ್ಟ್ 18) ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಕ್ಸೋ ಕಾಯ್ದೆ ರಕ್ಷಣೆಯಿದೆ. ಹೆಣ್ಣು ಮಕ್ಕಳ ರೀತಿಯಲ್ಲಿ ಗಂಡು ಮಕ್ಕಳಿಗೂ ರಕ್ಷಣೆಯಿದೆ. ವರದಿಗಳ ಪ್ರಕಾರ ಗಂಡುಮಕ್ಕಳ ಮೇಲಿನ ಲೈಂಗಿಕದೌರ್ಜನ್ಯ ಶೇ.54.4ರಷ್ಟಿದೆ. ಹೆಣ್ಣು ಮಕ್ಕಳ ಮೇಲಿ ದೌರ್ಜನ್ಯ ಶೇ.45.6ರಷ್ಟಿದೆ. ಪೋಕ್ಸೋ ಕಾಯ್ದೆಗೆ ಲಿಂಗ ಭೇದ ಇಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟು ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣ ಹಿನ್ನೆಲೆ
ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರಲ್ಲಿ ಈ ಲೈಂಗಿಕ ದೌರ್ಜನ್ಯ ಘಟನೆ ನಡೆದಿದ್ದು, ನಾಲ್ಕು ವರ್ಷದ ಬಳಿಕ ಅಂದರೆ 2024ರಲ್ಲಿ ಮಹಿಳೆ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆರೋಪಿ ಮಹಿಳೆ ಆರ್ಟ್ ಶಿಕ್ಷಕಿಯಾಗಿದ್ದು, ಚಿತ್ರಕಲೆ ಕಲಿಯಲು ಮನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕನನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾಳೆ. ಎರಡ್ಮೂರು ಬಾರಿ ಬಳಸಿಕೊಂಡಿದ್ದಾಳೆ. ಬಳಿಕ ಬಾಲಕ ಹಾಗೂ ಆತನ ಪೋಷಕರು ದುಬೈಗೆ ಶಿಫ್ಟ್ ಆಗಿದ್ದಾರೆ. ಆಗ ಬಾಲಕ ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದ. ಈ ಸಂಬಂಧ ಪೋಷಕರು ಬಾಲಕನನ್ನು ಸೈಕಾಲಜಿಸ್ಟ್ ಬಳಿ ಕರೆದುಕೊಂಡು ಹೋಗಿದ್ದು, ಆ ವೇಳೆ ಬಾಲಕ ಟೀಚರಮ್ಮನ ಕಾಮದಾಹದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆಗ ಬಾಲಕನ ಪೋಷಕರು ಬೆಂಗಳೂರಿಗೆ ಆಗಮಿಸಿ ಶಿಕ್ಷಕಿಯ ವಿರುದ್ಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದ್ರೆ, ಈ ಪ್ರಕರಣಕ್ಕೆ ಕೋರ್ಟ್ ತಡೆ ನೀಡಿತ್ತು.