ಉಡುಪಿ: ಮಕ್ಕಳಲ್ಲಿ ವೈದ್ಯರು, ಇಂಜಿನಿಯರ ಆಗಬೇಕೆಂಬ ಬಯಕೆ ಹೆಚ್ಚಾಗುತ್ತಿದೆ. ಆದರೆ ಶಿಕ್ಷಕರಾಗಬೇಕು ಎಂಬುವವರ ಸಂಖ್ಯೆ ಕಡಿಮೆಯಾಗಿದೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಹಿಂದಿನ ಕಾಲದಲ್ಲಿ ಶಿಕ್ಷಕ ವೃತ್ತಿಗೆ ಹೆಚ್ಚಿನ ಗೌರವವಿತ್ತು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಉಡುಪಿ ರಾಜಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್ ಮಾತನಾಡಿ, ನ್ಯಾಯಾಲಯಗಳು ವ್ಯಾಜ್ಯದ ತೀಮಾರ್ನಕ್ಕೆ ಮಾತ್ರವಲ್ಲ. ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸುತ್ತಿವೆ. ಕಾನೂನು ಸಲಹೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಾ ಸಹಕಾರ ನೀಡಲಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನುಪಟೇಲ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಸಮನ್ವಯ ಕೇಂದ್ರ ವೇದಿಕೆ(ರಿ.)ಯ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ವಹಿಸಿದ್ದರು. ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಗೀತಾ ಎಚ್.ಎಸ್.ಎನ್.ಫೌಂಡೇಶನ್ ಪ್ರವರ್ತಕ ಶಂಕರ ಐತಾಳ ಅಮಾಸೆಬೈಲ್, ಮಂಗಳೂರಿನ ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜ, ಎಸ್.ಡಿ.ಎಂ.ಸಿ.ಸಿ.ಸಿ.ಎಫ್ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ, ಎಸ್.ಡಿ.ಎಂ.ಸಿ.ಸಿ.ಸಿ.ಎಫ್ ಗೌರವ ಸಲಹೆಗಾರ್ತಿ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಕಾಪು ತಾಲೂಕು ಘಟಕ ಅಧ್ಯಕ್ಷ ರಾಜೇಶ್ ಜೆ.ಮೆಂಡನ್, ಬ್ರಹ್ಮಾವರ ತಾಲೂಕು ಘಟಕ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕುಂದಾಪುರ ಪುರಸಭಾ ಘಟಕ ಅಧ್ಯಕ್ಷ ಅಶ್ವಥ್ ಕುಮಾರ್, ಕಾರ್ಕಳ ತಾಲೂಕು ಘಟಕ ಅಧ್ಯಕ್ಷೆ ವೀಣಾ ರಾಜೇಶ್ ಭಂಡಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹಾಗೂ ಡಯಟ್ ಪ್ರಾಧ್ಯಾಪಕ ಡಾ.ಕಿಶೋರ್ಕುಮಾರ್ ಶೆಟ್ಟಿಯವರನ್ನು ಗೌರವಿಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಕಾಜರಗುತ್ತು, ಅಮಾಸೆಬೈಲು, ಮಣೂರು ಪಡುಕೆರೆ, ಅಚ್ಚಡ, ಮಾವಿನಕಟ್ಟೆ ಹಾಗೂ ಪೆರ್ವಾಜೆ ಸುಂದರ ಪುರಾಣಿಕ ಸಂಯುಕ್ತ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಮತ್ತು ಸರ್ಕಾರಿ ಶಾಲೆ ಪ್ರಶಸ್ತಿ ನೀಡಲಾಯಿತು. ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆ ಉಪಾಧ್ಯಕ್ಷೆ ಉಷಾ ರಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ತಾಲೂಕು ಘಟಕ ಅಧ್ಯಕ್ಷ ಎಸ್.ವಿ.ನಾಗರಾಜ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್ ವಂದಿಸಿದರು. ಶೋಭಾ ಶಾಂತಾರಾಜ್ ಹಾಗೂ ಮೋಹನ್ ಸಾಲಿಕೇರಿ ನಿರೂಪಿಸಿದರು.