ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ “ಟೆಕ್ ಯುವ – 26” ಕಾರ್ಯಕ್ರಮವು ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರ ಮಾರ್ಗದರ್ಶನದೊಂದಿಗೆ ಉದ್ಘಾಟನೆಗೊಂಡಿತು. ಭಾರತ, ಅಮೇರಿಕ, ಫಿಲಿಪೈನ್ಸ್ ಹಾಗೂ ಇನ್ನಿತರ ದೇಶಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ದಿಯಾ ಸಿಸ್ಟಮ್ಸ್ (ಮಂಗಳೂರು) ಪ್ರೈ. ಲಿ. ಮತ್ತು ಗ್ಲೋ ಟಚ್ ಟೆಕ್ನಾಲಜೀಸ್ ಪ್ರೈ. ಲಿ. ಸಂಸ್ಥೆಗಳ ಪೂರ್ಣಕಾಲಿಕ ನಿರ್ದೇಶಕರು ಹಾಗೂ ಯುನಿಫೈ ಸಿಎಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಂತರರಾಷ್ಟ್ರೀಯ ಮಾನವ ಸಂಪನ್ಮೂಲ ಸೇವೆಗಳ ಮುಖ್ಯಾಧಿಕಾರಿಯಾದ ಶ್ಯಾಮ್ ಪ್ರಸಾದ್ ಹೆಬ್ಬಾರ್ ರವರು “ಟೆಕ್ ಯುವ-26” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಟೆಕ್ ಯುವ 26 ತಾಂತ್ರಿಕ ಉತ್ಸವವನ್ನು ಉದ್ಘಾಟಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾಲೇಜಿನ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್ ಹೆಗಡೆ, ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ., ಟೆಕ್ ಯುವ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಟೆಕ್ ಯುವ-26 ರ ವಿದ್ಯಾರ್ಥಿ ಸಮನ್ವಯಕಾರರಾದ ಆದರ್ಶ್, ಸಾಗರ್ ಎ, ಸ್ನೇಹಾ ರೀಶೆಲ್ ರೊಡ್ರಿಗಸ್, ಮತ್ತು ಕಾರ್ತಿಕ್ ವೆರ್ಣೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಶ್ಯಾಮ್ ಪ್ರಸಾದ್ ಹೆಬ್ಬಾರ್ ರವರು ಮಾತನಾಡಿ, ಟೆಕ್ ಯುವ ಕಾರ್ಯಕ್ರಮವನ್ನು ಸಂಯೋಜಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ವಿದ್ಯಾರ್ಥಿಗಳ ಉತ್ತಮ ಪ್ರಯತ್ನವನ್ನು ಶ್ಲಾಘಿಸಿದರು. ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಜಾಗೃತಿಗೆ ಮಹತ್ವವಿದೆ. ಸೈಬರ್ ದಾಳಿಗಳಿಂದ ವೈಯುಕ್ತಿಕ ಮಾಹಿತಿ, ಬ್ಯಾಂಕ್ ಖಾತೆ, ಹಾಗೂ ಡಿಜಿಟಲ್ ಗುರುತುಗಳಿಗೂ ಅಪಾಯ ಉಂಟಾಗುತ್ತಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೈಬರ್ ವ್ಯವಸ್ಥೆಯನ್ನು ರಕ್ಷಿಸಿ, ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸುವ ಮೂಲಕ ಸೈಬರ್ ರಕ್ಷಣಾಕಾರರಾಗಬೇಕು ಹಾಗೂ ಇತರರಿಗೆ ಸೈಬರ್ ರಕ್ಷಣೆಯ ಕುರಿತು ಮಾರ್ಗದರ್ಶನವನ್ನು ನೀಡಬೇಕು ಎಂದು ಶ್ರೀ ಶ್ಯಾಮ್ ಪ್ರಸಾದ್ ಹೆಬ್ಬಾರ್ ರವರು ಹೇಳಿದರು, ಹಾಗೂ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಮಾತನಾಡಿ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೃಜನಶೀಲತೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ನಿರಂತರ ಕಲಿಕೆ, ಆವಿಷ್ಕಾರ, ಕೌಶಲ್ಯಗಳ ಉನ್ನತೀಕರಣ, ಮತ್ತು ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಸಮಾಜಕ್ಕೆ ಉಪಯುಕ್ತವಾಗುವ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು ಸ್ವಾಗತ ಭಾಷಣವನ್ನು ಮಾಡಿದರು, ಹಾಗೂ ಟೆಕ್ ಯುವ ಕಾರ್ಯಕ್ರಮದ ಹಿನ್ನಲೆ ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ಸಭೆಗೆ ನೀಡಿದರು.
ಟೆಕ್ ಯುವ-26 ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ. ರವರು ವಂದನಾರ್ಪಣೆ ಸಲ್ಲಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಧನ್ಯಾಶ್ರೀ ಪ್ರಾರ್ಥನೆಯನ್ನು ಮಾಡಿದರು.
ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ ಸ್ಪರ್ಧಾಳುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 1,500 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎರಡು ದಿನಗಳ ಕಾಲ ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗಗಳಲ್ಲಿ ಆಯೋಜಿಸಿದ್ದ 48 ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

