ಉಡುಪಿ: ಕೇಂದ್ರ ಸರ್ಕಾರ ಜಾರಿಗೊಳಿಸುವ ಜನಪರ ಯೋಜನೆಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ತತ್ವವೇ ಪ್ರೇರಣೆಯಾಗಿದೆ ಎಂದು ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಎನ್.ರಾಮಚಂದ್ರ ರಾವ್ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಹಾಗೂ ‘ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನ ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಅನೇಕ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು, ವಿಪ್ಲವ ಕಾಲದಲ್ಲಿ ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್ಟಿ ದರ ಇಳಿಕೆ ಮಾಡುವ ಮೂಲಕ ಬಡವರು ಮತ್ತು ಮಧ್ಯಮವರ್ಗದವರ ಹಿತ ಕಾಪಾಡಿದ್ದಾರೆ ಎಂದರು.
ಜಿಲ್ಲಾಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ ಅವರ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಮಾಜಿ ಜಿಲ್ಲಾಧ್ಯಕ್ಷ ಭಾರತೇಶ್ ವಿಶೇಷ ಆಹ್ವಾನಿತರಾಗಿದ್ದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ನಗರಸಭಾ ಸದಸ್ಯ ಗಿರೀಶ್ ಅಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನವೀನ್ ನಾಯ್ಕ ವಂದಿಸಿದರು.