ಉಡುಪಿ: ಕೃಷ್ಣ ಮಠದಲ್ಲಿ ಭಾನುವಾರದಿಂದ ಶೀರೂರು ಮಠದ ಪರ್ಯಾಯ ಪರ್ವ ಪ್ರಾರಂಭವಾಗಿದ್ದು, ಪ್ರಾತ@ಕಾಲ 5.45ಕ್ಕೆ ಶುಭ ಮುಹೂರ್ತದಲ್ಲಿ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣಗೈದರು.
ಜೋಡುಕಟ್ಟೆಯಿಂದ ಪಟ್ಟದ ದೇವರ ಜತೆಗೆ ಮೇನೆಯಲ್ಲಿ ಕುಳಿತು ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿದ ಶೀರೂರು ಶ್ರೀಗಳು 5.15ಕ್ಕೆ ಕನಕ ಕಿಂಡಿಯಲ್ಲಿ ಕೃಷ್ಣ ದರ್ಶನ ಪಡೆದರು. ಈ ಸಂದರ್ಭ ವಿಪ್ರರಿಗೆ ನವಗ್ರಹ ದಾನ, ಫಲದಾನ ನೀಡಲಾಯಿತು. ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದರ್ಶನ ಪಡೆದು ಕೃಷ್ಣ ಮಠ ಪ್ರವೇಶಿಸಿದರು. ನಿರ್ಗಮನ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಶೀರೂರು ಶ್ರೀಗಳನ್ನು ಸ್ವಾಗತಿಸಿ, ಕೃಷ್ಣ ದೇವರ ಮುಂಭಾಗ ಗಂಧಾದಿ ಉಪಚಾರ ಸಲ್ಲಿಸಿದರು. ಬಳಿಕ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಅಕ್ಷಯಪಾತ್ರೆ, ಸಟ್ಟುಗವನ್ನು ಹಸ್ತಾಂತರಿಸಿದರು. ಶೀರೂರು ಶ್ರೀಪಾದರು ತಾಯಿಗೆ ನಮಸ್ಕರಿಸಿದರು. ಬಳಿಕ ಪುತ್ತಿಗೆ ಶ್ರೀಪಾದರು ಸರ್ವಜ್ಞಪಿಠದಲ್ಲಿ ಶ್ರೀಗಳನ್ನು ಕುಳ್ಳಿರಿಸಿ ಆಶೀರ್ವದಿಸಿದರು.

ಮಾಲಿಕಾ ಮಂಗಳಾರತಿ
ಬಡಗುಮಾಳಿಗೆಯಲ್ಲಿ ಅರಳುಗದ್ದುಗೆಯಲ್ಲಿ ಪರ್ಯಾಯ ಶೀರೂರು ಮಠದಿಂದ ಸಾಂಪ್ರದಾಯಿಕ ದರ್ಬಾರ್ನಲ್ಲಿ ಭಾಗವಹಿಸಿದ ಕೃಷ್ಣಾಪುರ ಶ್ರೀ, ಪಲಿಮಾರು ಶ್ರೀ, ಪೇಜಾವರ ಶ್ರೀ, ಕಾಣಿಯೂರು ಶ್ರೀ, ಸೋದೆ ಶ್ರೀ, ಅದಮಾರು ಕಿರಿಯ ಶ್ರೀ, ಪಲಿಮಾರು ಕಿರಿಯ ಸ್ವಾಮೀಜಿಯವರನ್ನು ಮಾಲಿಕಾ ಮಂಗಳಾರತಿ ಮೂಲಕ ಗೌರವಿಸಲಾಯಿತು. ಪರ್ಯಾಯ ಮಠದ ದಿವಾನ ಡಾ. ಉದಯ್ ಸರಳತ್ತಾಯ ವಿವಿಧ ಮಠಾಧೀಶರಿಗೆ ಆರತಿ ಬೆಳಗಿದರು.

ಲಕ್ಷ ಜನರಿಗೆ ಭೋಜನಪ್ರಸಾದ
ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ಅನ್ನಬ್ರಹ್ಮ ಉಡುಪಿ ಕೃಷ್ಣನ ಸನ್ನಿಧಿಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಮಧ್ಯಾಹ್ನ ಭೋಜನ ಪ್ರಸಾದ ಸ್ವೀಕರಿಸಿದರು. ಮಹಾಪೂಜೆ ಬಳಿಕ ಶೀರೂರು ಶ್ರೀಗಳು ಪಲ್ಲಪೂಜೆ ನೆರವೇರಿಸಿ, ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಪಲ್ಯ, ಅನ್ನ ಸಾರು, ಮಟ್ಟುಗುಳ್ಳ ಸಾಂಬಾರು, ಮೈಸೂರ್ ಪಾಕ್, ಬೂಂದಿ ಲಾಡು, ಸಜ್ಜಿಗೆ ವಡೆ, ಗೋಧಿಪಾಯಸ ನೀಡಲಾಯಿತು. ಮಧ್ವಾಂಗಣ, ರಾಜಾಂಗಣ, ಅನ್ನಬ್ರಹ್ಮ, ಅನಂತೇಶ್ವರ, ಭೋಜನಶಾಲೆ, ಬೈಲಕೆರೆ ಪಾರ್ಕಿಂಗ್ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ನಗರದಲ್ಲಿ ಪೊಲೀಸ್ ಕಣ್ಗಾವಲು
ಪರ್ಯಾಯ ಭದ್ರತೆಗಾಗಿ ಉಡುಪಿ, ದ.ಕ., ಚಿಕ್ಕಮಗಳೂರು, ಉತ್ತರ ಕನ್ನಡ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಶನಿವಾರ ಸಾಯಂಕಾಲದಿಂದಲೇ ಕರ್ತವ್ಯ ನಿರತರಾಗಿದ್ದ ಪೊಲೀಸರು ಯಾವುದೇ ಅವಡಕ್ಕೆ ಆಸ್ಪದವಿಲ್ಲದಂತೆ ವ್ಯವಸ್ಥಿತವಾಗಿ ಬಂದೋಬಸ್ತ್ ನಿರ್ವಹಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

