ದೇಶ ಕಂಡ ಮಹಾನ್ ನೇತಾರರಾದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಕೊಡುಗೆ ಮತ್ತು ಚಿಂತನೆ ನಮಗೆಲ್ಲರಿಗೂ ಆದರ್ಶವಾಗಿದೆ. ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉತ್ತರದಿಂದ ದಕ್ಷಿಣದವರೆಗೆ ಭಾರತವನ್ನು ಏಕಸೂತ್ರದಲ್ಲಿ ಬೆಸೆದಿದ್ದರು ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಜಿಲ್ಲಾಡಳಿತ, ನಗರಸಭೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಅಜ್ಜರಕಾಡು ಭುಜಂಗ ಪಾರ್ಕಿನ ಗಾಂಧಿ ಕಟ್ಟೆಯಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಜನತೆ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ಸ್ವರಾಜ್ಯದಿಂದ ಸ್ವಾವಲಂಬಿಗಳಾಗುವ ಕನಸನ್ನು ಅವರು ಕಂಡಿದ್ದರು. ಅವರ ಆಶಯದಂತೆ ದೇಶವು ಬಹಳಷ್ಟು ಬದಲಾವಣೆಗಳನ್ನು ಕಂಡಿದ್ದು ಆರ್ಥಿಕತೆಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನವನ್ನು ಹೊಂದಿದೆ. ಕೃಷಿ ಕ್ಷೇತ್ರದಿಂದ ಹಿಡಿದು ಆರೋಗ್ಯ, ಕ್ರೀಡೆ, ರಕ್ಷಣಾ ಕ್ಷೇತ್ರ, ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಭಾರತದ ಸಾಧನೆ ವಿಶ್ವದ ಗಮನವನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದರು.
ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮಾದರಿ ಎನಿಸಿರುವ ಉಡುಪಿ ಜಿಲ್ಲೆಗೂ ಗಾಂಧೀಜಿಯವರಿಗೂ ಗಾಢವಾದ ನಂಟಿದೆ. 1934 ರಲ್ಲಿ ಜಿಲ್ಲೆಗೂ ಭೇಟಿ ನೀಡಿ ಅಜ್ಜರಕಾಡಿನಲ್ಲಿ ಸ್ವಾತಂತ್ರ್ಯ ಸೇನಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಗಾಂಧೀಜಿಯವರ ಭೇಟಿಯ ನೆನಪಿಗಾಗಿ ಅವರ ಪುತ್ಥಳಿಯನ್ನು ಇಲ್ಲಿ ಪ್ರತಿಷ್ಠಾಪಿಸಿ ಅವರ ಆದರ್ಶಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಗರಸಭಾಧ್ಯಕ್ಷ ಪ್ರಭಾಕರ್ ಪೂಜಾರಿ ಮಾತನಾಡಿ, ಗಾಂಧೀಜಿಯವರ ಆಶಯದಂತೆ ನಾವೆಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಪೌರಕಾರ್ಮಿಕರಿಗೆ ಸಾರ್ವಜನಿಕರುತಮ್ಮ ಮನೆಯ ಹಸಿ ಕಸ ಮತ್ತು ಒಣಗಿದ ಕಸವನ್ನು ವಿಂಗಡಣೆ ಮಾಡಿ ನೀಡಬೇಕು. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು ಇದರಿಂದ ಕಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯ ಎಂದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಬಿ., ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಮಣಿಪಾಲ್ ಮತ್ತಿತರರು ಉಪಸ್ಥಿತರಿದ್ದರು.