ಎಂ ಸಿ ಎಸ್ ಬೇಂಕಿನ ಕಲ್ಪವೃಕ್ಷ ಪ್ರಶಸ್ತಿಯನ್ನು ಪಡೆದ ತರುವಾಯ ಸಹಕಾರ ಕ್ಷೇತ್ರದಲ್ಲಿ ನನ್ನ ಅಭಿವೃದ್ಧಿ ವರ್ಷದಿಂದ ವರ್ಷಕ್ಕೆ ಉನ್ನತಿಗೆ ಏರಿದಕ್ಕೆ ಬಹಳ ಸಂತೋಷವಾಗುತ್ತಿದೆ. ಎಂಸಿಎಸ್ ಬ್ಯಾಂಕು ಸಹಕಾರಿ ಮಾಣಿಕ್ಯ ಪ್ರಶಸ್ತಿಯನ್ನು ಪಡೆದಿರುವುದು ಬ್ಯಾಂಕಿನ ಪ್ರಗತಿಯ ಸಂಕೇತ. ವಾಣಿಜ್ಯ ಬ್ಯಾಂಕುಗಳು ಸಂಕುಚಿತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿದ ಉದ್ಯೋಗಿಗಳು ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ಬೆರೆಯುತ್ತಿದ್ದು ಸಹಕಾರಿ ಕ್ಷೇತ್ರವು ಅತ್ಯಂತ ಅಭಿವೃದ್ಧಿಯ ಹಂತಕ್ಕೆ ಬೆಳೆಯುತ್ತಿದೆ ಎಂದು ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಹಕಾರ ಶಿಕ್ಷಣ ಸಂಸ್ಥೆಗೆ ಒಂದು ಲಕ್ಷ ದ ಚೆಕ್ಕನ್ನು ಬೃಂದಾ ನಾಯರ್ ಅವರಿಗೆ ನೀಡಿ, ಸಹಕಾರ ಆರೋಗ್ಯ ಕಾರ್ಡನ್ನು ವಿತರಿಸಿ, ಶಿರ್ತಾಡಿ ವ್ಯವಸಾಯ ಸೇವಾ ಸಂಘಕ್ಕೆ 1 ಲಕ್ಷದ ಚೆಕ್ಕನ್ನು ಬಿಡುಗಡೆ ಮಾಡಿ ಅಭಿಮಾನಪಟ್ಟರು.
ಸಿಕ್ಕಿದ್ದು ಎಲ್ಲರ ಪಾಲು- ಅತಿವಂದನೀಯ ಡಾ. ಫ್ರಾನ್ಸಿಸ್ ಸೆರಾವೋ
ಸಾಲ ಪಡೆದು ಮೃತಪಟ್ಟವರಿಗೆ ಋಣ ಪರಿಹಾರ ನಿಧಿಯಿಂದ ಒಂದು ಲಕ್ಷ ಹಣ ಭರಿಸುವ ನಿಬಂಧನೆಯ ಪ್ರತಿಗಳನ್ನು ಬಿಡುಗಡೆ ಮಾಡಿದರು. ಮೂಡುಬಿದಿರೆಯ ಮಣ್ಣಿನ ಮಗನಾದ ನಾನು ಅಲಂಗಾರಿನ ಸಂತ ತೋಮಸ್ ಶಾಲೆಯಲ್ಲಿ ಕಲಿಯುತ್ತಿದ್ದಾಗ ಕಲಿತ, ಜಾತ್ಯಾತೀತ, ಪಕ್ಷಾತೀತ, ಭಾರತೀಯತೆ, ಎಲ್ಲರೂ ಒಂದೇ ಎನ್ನುವ ಭಾವನೆ ಹಾಗೂ ಸಿಕ್ಕಿದ್ದು ನನ್ನದಲ್ಲ ಎಲ್ಲರ ಪಾಲು ಎಂಬ ತತ್ವ ಇಂದಿಗೂ ನನ್ನ ಬದುಕಿನಲ್ಲಿ ಜಾರಿಯಲ್ಲಿದೆ, ಎಲ್ಲರನ್ನೂ ಸಹೋದರ ಭಾವನೆಯಿಂದ ಕಾಣುವ ತತ್ವವನ್ನು ಬೆಳೆಸಿಕೊಳ್ಳಬೇಕೆಂದು ಮೈಸೂರು ಕೆಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿವಂದನೀಯ ಡಾ. ಫ್ರಾನ್ಸಿಸ್ ಸೆರಾವೋ ತಮ್ಮ ಆಶೀರ್ವಚನದಲ್ಲಿ ಕೇಳಿಕೊಂಡರು.
ಸಹಕಾರ ರತ್ನ, ಸೊಸೈಟಿಯ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಸಹಕಾರಿ ಮತ್ತು ಸಮಾಜ ಸೇವಕ ಸೊಸೈಟಿಯ ನಿರ್ದೇಶಕ ಎಂ ಜಾರ್ಜ್ ಮೋನೀಸ್ ಅವರನ್ನು ಸಹಕಾರ ಕಲ್ಪವೃಕ್ಷ ಪ್ರಶಸ್ತಿ ನೀಡಿ ಸನ್ಮಾನಿಸಿ, ದೀಪ ಬೆಳಗಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಜಿ ಸಚಿವ, ನಿರ್ದೇಶಕ ಕೆ ಅಭಯ ಚಂದ್ರ ಜೈನ್, ಮೂಡುಬಿದಿರೆ ಕೋರ್ಪಸ್ ಕ್ರಿಸ್ತಿ ಚರ್ಚ್ ನ ವಲಯ ಧರ್ಮ ಗುರು ಓನಿಲ್ ಡಿಸೋಜಾ, ದ ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಡಾ. ಎಚ್ ಎನ್ ರಮೇಶ್, ದ ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಲ್ಯೊಟ್ಟು, ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಯುವ ಪ್ರತಿಭೆ ಮಾಸ್ಟರ್ ಶ್ರೀಶಾ ಪ್ರಭು ಇವರಿಂದ ಸಾಕ್ಸೋಫೋನ್ ವಾದನ ನಡೆಯಿತು. ಸಭಾ ಕಾರ್ಯಕ್ರಮದ ತರುವಾಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದಿಂದ ಸಿಂಧೂರ ಸಂಗ್ರಾಮ ನಡೆಯಿತು. ಉಪಾಧ್ಯಕ್ಷ ಎಂ ಗಣೇಶ್ ನಾಯಕ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ರಘುವೀರ್ ಕಾಮತ್, ನಿರ್ದೇಶಕರುಗಳಾದ ಮನೋಜ್ ಕುಮಾರ್ ಶೆಟ್ಟಿ, ಎಮ್ ಪದ್ಮನಾಭ, ಸಿ ಎಚ್ ಅಬ್ದುಲ್ ಗಪೂರ್, ಜಯರಾಮ ಕೋಟ್ಯಾನ್, ಎಂಪಿ ಅಶೋಕ್ ಕಾಮತ್, ದಯಾನಂದ ನಾಯ್ಕ್, ಪ್ರೇಮಾ ಸಾಲಿಯಾನ್, ಅನಿತಾ ಶೆಟ್ಟಿ, ಹಾಗೂ ಇತರರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
.
ವರದಿ ರಾಯಿ ರಾಜ ಕುಮಾರ
