ಇತಿಹಾಸ ಪ್ರಸಿದ್ಧ ಮೂಲ್ಕಿ ಅರಸು ಕಂಬಳ ಡಿಸೆಂಬರ್ 28

0
86

ಇತಿಹಾಸ ಪ್ರಸಿದ್ಧ ಮೂಲ್ಕಿ ಅರಸು ಕಂಬಳವು ತುಳುನಾಡಿನ ಜಾನಪದ ಕ್ರೀಡೆಯಾಗಿ ವಿಶಿಷ್ಟ ಪರಂಪರೆಯನ್ನು ಹೊಂದಿದ್ದು, ಈ ವರ್ಷ ಡಿಸೆಂಬರ್ 28 ರಂದು ನಡೆಯಲಿದೆ. ಕಂಬಳ ಸಮಿತಿಯವರು ದಿನಾಂಕವನ್ನು ನಿಗದಿ ಮಾಡಿ ಅಧಿಕೃತವಾಗಿ ಪ್ರಕಟಣೆ ನೀಡಿದ್ದಾರೆ.

ಅರಸು ಕಂಬಳದ ಹಿನ್ನಲೆ

ಅರಸು ಕಂಬಳವು 18ನೇ ಶತಮಾನದ ಮಧ್ಯಾವಧಿಯಲ್ಲಿ ಆರಂಭವಾಗಿದ್ದು, ಅರಸರ ಮನೆಯ ಎದುರಿನ ಗದ್ದೆಯಲ್ಲಿ ಕಂಬಳ ನಡೆಯಬೇಕೆಂಬ ಆಶಯದಂತೆ ಅಜಾನುಬಾಹು ಆಗೋಳಿ ಮಂಜನವರಿಂದ ಇದರ ಏರ್ಪಾಡಾಗಿತ್ತು ಎನ್ನಲಾಗುತ್ತದೆ. ಗದ್ದೆಯಲ್ಲಿ ಕಂಬಳ ನಡೆದರೂ ಅರಸರು ಗದ್ದೆಗೆ ಇಳಿಯುವುದಿಲ್ಲ ಹಾಗೂ ನೇರವಾಗಿ ಕಂಬಳ ವೀಕ್ಷಿಸುವುದಿಲ್ಲ. ಆದರೆ ಅರಸರಿಗೆ ಸಲ್ಲಬೇಕಾದ ಎಲ್ಲಾ ಮರ್ಯಾದೆಗಳನ್ನು ಸಂಪ್ರದಾಯದಂತೆ ನೀಡಲಾಗುತ್ತದೆ.

ಎರುಭಂಟ ದೈವವು ಕೋಲ ಕಟ್ಟಿಕೊಂಡು ಸೀಮೆಯ ಜನರಿಗೆ ಹಾಗೂ ಅರಸರಿಗೆ ಅಭಯ ನೀಡುವ ಸಂಪ್ರದಾಯವೂ ಇಂದಿಗೂ ಜೀವಂತವಾಗಿದೆ.

ಸಂಪ್ರದಾಯಗಳು ಇನ್ನೂ ಜೀವಂತ

ಅರಸು ಕಂಬಳಕ್ಕೆ ಒಂದು ತಿಂಗಳ ಮುಂಚಿತವಾಗಿ ಜೋಯಿಸರು ನಿಗದಿ ಮಾಡಿದ ಮುಹೂರ್ತದಲ್ಲಿ ಅರಸರ ಕೋಣಗಳು ಮೊದಲು ಗದ್ದೆಗೆ ಇಳಿಯುತ್ತವೆ. ನಂತರ ಭಾವಗುತ್ತು, ಭರ್ಕೆಯವರು ತಮ್ಮ ತಮ್ಮ ಮರ್ಯಾದೆಯಂತೆ ಕೋಣಗಳನ್ನು ಇಳಿಸುವ ಕ್ರಮ ಇಂದಿಗೂ ಮುಂದುವರಿದಿದೆ.

ಕಂಬಳದ ದಿನ ಅರಮನೆಯ ಕೋಣ ಹೊರಡುವ ವೇಳೆ ಕೊಡಿಕಟ್ಟುವ ಸಂಪ್ರದಾಯವಿದ್ದು, ಅಣಕು ಕಂಬಳದ ನಂತರ ಪಡುತೋಟದ ಗ್ರಾಮಸ್ಥರಿಂದ ಉಳುಮೆ ಕಾರ್ಯ ನಡೆಯುತ್ತದೆ. ಬಪ್ಪನಾಡಿನ ಕಾಂತು ಸೇವೆಗಾರರ ಕೋಣಗಳು ಅರಸರ ಅನುಮತಿ ಪಡೆದು ಕಂಬಳಕ್ಕೆ ಇಳಿಯುವ ಪದ್ಧತಿಯೂ ಈಗಲೂ ಇದೆ. ಬಪ್ಪನಾಡು ದೇವಾಲಯದಲ್ಲಿ ಹಣ್ಣು–ಕಾಯಿ ಪೂಜೆ ನೆರವೇರಿಸಿ ತಂದ ಪ್ರಸಾದವನ್ನು ಕಂಬಳ ಗದ್ದೆಗೆ ಹಾಕಿದ ಬಳಿಕ ಕೋಣಗಳನ್ನು ಇಳಿಸಲಾಗುತ್ತದೆ.

ಕಾಲಾಂತರದಲ್ಲಿ ಬದಲಾವಣೆ

ಸರಕಾರದ ಭೂ ಸುಧಾರಣೆ ಕಾನೂನು ಜಾರಿಗೆ ಬಂದ ನಂತರ ರೈತರ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಿ, ಕೋಣಗಳನ್ನು ಸಾಕುವ ಪದ್ಧತಿ ಕಡಿಮೆಯಾಗಿದೆ. ಟ್ರಾಕ್ಟರ್ ಬಳಕೆ ಹೆಚ್ಚಿದ ಪರಿಣಾಮ, ಕೋಣಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಇದೀಗ ಅಪರೂಪವಾಗಿದೆ.

ಆದರೂ ಮೂಲ್ಕಿಯಂತಹ ಸೀಮೆಯಲ್ಲಿ ಕಂಬಳ ತನ್ನ ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ. ಕೋಣಗಳ ಸ್ಪರ್ಧೆಯ ಜೊತೆಗೆ ರೈತರಿಗೆ ಅಗತ್ಯವಿರುವ ಕೃಷಿ ಸಲಕರಣೆಗಳ ಪ್ರದರ್ಶನವೂ ನಡೆಯುತ್ತಿರುವುದು ಅರಸು ಕಂಬಳಕ್ಕೆ ವಿಶೇಷ ಮಹತ್ವ ತಂದಿದೆ. ಇದರಿಂದ ಇತರ ಊರುಗಳ ಕಂಬಳಗಳಿಗಿಂತ ಹೆಚ್ಚು ಗಮನ ಸೆಳೆಯುತ್ತಿದೆ.

ಅರಸು ಪ್ರಶಸ್ತಿ ಪ್ರದಾನ

ಅರಸು ಕಂಬಳದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅರಸು ಪ್ರಶಸ್ತಿ ಪ್ರದಾನ ಮಾಡುವ ಪರಂಪರೆಯೂ ಇದೆ. ಈ ವರ್ಷವೂ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕಂಬಳ ಸಮಿತಿ ತಿಳಿಸಿದೆ.

ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ

LEAVE A REPLY

Please enter your comment!
Please enter your name here