ಕಾಸರಗೋಡು ನಗರಸಭೆಯ ಪ್ರಥಮ ವಾರ್ಡ್ ಸಭೆ ಯಶಸ್ವಿ

0
11

ಕಾಸರಗೋಡು ನಗರಸಭೆಯ 2026- 27ನೇ ವಾರ್ಷಿಕ ಯೋಜನೆಯ ರೂಪೀಕರಣಕ್ಕಾಗಿ 9ನೇ ವಾರ್ಡ್ ನುಳ್ಳಿಪಾಡಿ ( ಅಣoಗೂರು, ಜೆ.ಪಿ ನಗರ, ಕನ್ನಡ ಗ್ರಾಮ) ದ ವಾರ್ಡ್ ಸದಸ್ಯರ ಸಭೆಯು ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಫೆಬ್ರವರಿ 9ರಂದು ಜರುಗಿತು.

ವಾರ್ಡ್ ಸಭೆಯನ್ನು ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಉದ್ಘಾಟಿಸಿದರು. ಅವರು ಕಾಸರಗೋಡು ನಗರ ಸಭೆಯನ್ನು ರಾಜ್ಯದಲ್ಲಿ ಅತ್ಯುತ್ತಮ ನಗರಸಭೆಯನ್ನಾಗಿ ಜನರ ಸಹಕಾರದಿಂದ ರೂಪೀ ಕರಿಸುವುದಕ್ಕಾಗಿ ನಗರಸಭೆಯ ಎಲ್ಲಾ ವಾರ್ಡ್ ಸಭೆಗಳಿಗೆ ಮುಖತ ಭೇಟಿಯಾಗಿ ವಾರ್ಡ್ ಸದಸ್ಯರ ಸಲಹೆ ಸೂಚನೆ ಮಾರ್ಗದರ್ಶನ ಅಭಿಪ್ರಾಯಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು .

ಕಾಸರಗೋಡು ನಗರಸಭೆಯ ಪ್ರಥಮ ವಾರ್ಡ್ ಸಭೆಯು ಕನ್ನಡ ಗ್ರಾಮದಲ್ಲಿ ಅತ್ಯುತ್ತಮವಾಗಿ ಸಂಘಟಿಸಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತಾ ಎಲ್ಲಾ ಭಾಷಾ ಸಮುದಾಯದವರ ಬೇಡಿಕೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು, ಭಾಷಾ ಸಮನ್ವಯ ಪ್ರದೇಶವಾದ ಕಾಸರಗೋಡು ನಗರಸಭೆಯ ಎಲ್ಲಾ ಪ್ರಕಟಣೆಗಳನ್ನು ಕನ್ನಡದಲ್ಲೂ ಮುದ್ರಿಸಲಾಗುವುದೆಂದು ಹೇಳಿದರು. ನಗರಸಭೆಯ 9ನೇ ವಾರ್ಡ್ ಕೌನ್ಸಿಲರ್ ಶ್ರೀಮತಿ ಶಾರದಾ ದಯಾನಂದ ಜೆ.ಪಿ ನಗರ ಅಧ್ಯಕ್ಷತೆ ವಹಿಸಿದರು.

ನಗರಸಭೆಯ ಆರೋಗ್ಯ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸಾ ಹಮೀದ್ ಅವರು 2026- 27ನೇ ವಾರ್ಷಿಕ ಯೋಜನೆಯಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದರು. 9ನೇ ವಾರ್ಡ್ ಸದಸ್ಯರು ಪ್ರಸ್ತಾವಿಸಿದ ವಿವಿಧ ಬೇಡಿಕೆಗಳನ್ನು ದಾಖಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರಸಭೆಯ ಮಾಜಿ ಕೌನ್ಸಿಲರ್ ಶಂಕರ ಜೆ.ಪಿ ನಗರ ಹಾಗೂ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಉಪಸ್ಥಿತರಿದ್ದರು.

ಶಿವರಾಮ ಕಾಸರಗೋಡು ಅವರು ಕನ್ನಡ ಗ್ರಾಮದಲ್ಲಿ ಕಾಸರಗೋಡು ಗೋ- ಕುಟೀರ ನಿರ್ಮಾಣವಾಗುತ್ತಿದ್ದು , ಗೋ- ಕುಟೀರದ ಆವರಣದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವಉದ್ಯೋಗ ಕೇಂದ್ರ, ವಿದ್ಯಾರ್ಥಿಗಳು ,ಯುವಜನರು, ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕೇಂದ್ರ,ವಸ್ತ್ರ ವಿನ್ಯಾಸ, ಕಂಪ್ಯೂಟರ್ ಡಿಜಿಟಲ್ ಮಾಧ್ಯಮ ಕೇಂದ್ರ, ಗ್ರಂಥಾಲಯ, ಹಿರಿಯ ನಾಗರಿಕರಿಗಾಗಿ ಗ್ರಾಮೀಣ ಕ್ಲಿನಿಕ್ ಮುಂತಾದ ವಿವಿಧ ಯೋಜನೆಗಳ ಕಾರ್ಯ ಯೋಜನೆಗಳನ್ನು ಕಾಸರಗೋಡು ನಗರಸಭಾಧ್ಯಕ್ಷರು, ಆರೋಗ್ಯ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಪ್ರಸ್ತಾಪಿಸಿದರು .

ವಾರ್ಡ್ ಸಭೆಯಲ್ಲಿ ನಗರಸಭೆಯ ಆರೋಗ್ಯ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸ ಹಮೀದ್ ಅವರು ನಗರ ಸಭೆಯ 2025- 26 ನೇ ವಾರ್ಷಿಕ ಯೋಜನೆ ಅವಲೋಕನ, 2026- 27ನೇ ವಾರ್ಷಿಕ ಯೋಜನೆ ರೂಪಿಕರಣ, 2026- 27ನೇ ವರ್ಷದ ಅಯ್ಯಂಗಾಳಿ ನಗರ ಉದ್ಯೋಗ ಖಾತರಿ ಆಕ್ಷನ್ ಪ್ಲಾನ್ ಅಂಗೀಕಾರ, ಅಯ್ಯಂಗಾಳಿ ನಗರ ಉದ್ಯೋಗ ಖಾತರಿ ಮಾನಿಟರಿಂಗ್ ಸಮಿತಿ ಸದಸ್ಯರನ್ನು ಆಯ್ಕೆ, ಅಯ್ಯಂಗಾಳಿ ಉದ್ಯೋಗ ಖಾತರಿ ಸೋಶಿಯಲ್ ಆಡಿಟ್ ಟೀಂ ಸದಸ್ಯರನ್ನು ಆಯ್ಕೆ ಪ್ರಕ್ರಿಯೆಯ ಮಾಹಿತಿಗಳನ್ನು ಸಭೆಯ ಮುಂದಿರಿಸಿದರು. ಸುಚಿತ್ರಾ ಸ್ವಾಗತಿಸಿ, ಶಾಂತಾ ಧನ್ಯವಾದವಿತ್ತರು . ನೂರಾರು ಸಂಖ್ಯೆಯಲ್ಲಿ ವಾರ್ಡ್ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here