ಲಂಕೆಯ ವಿನಾಶಕ್ಕೆ ನಾಂದಿಯಾದ ಬಂಗಾರದ ಜಿಂಕೆ

0
53

ಶೂರ್ಪನಖಿಗಾದ ಅವಮಾನಕ್ಕೆ ಪ್ರತೀಕಾರವಾಗಿ ರಾವಣನು ಮಾವನಾದ ಮಾರೀಚನ ಸಹಕಾರ ಅಪೇಕ್ಷಿಸುತ್ತಾನೆ. ಚಿನ್ನದ ಜಿಂಕೆಯಾಗಿ ಸೀತೆಯನ್ನು ಮೋಹಗೊಳಿಸಿ ಅಪಹರಿಸಲು ನೆರವಾಗಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ಮಾರೀಚ ಮೊದಲು ಒಪ್ಪದೆ ರಾವಣನಿಗೆ ರಾಮನಿಂದ ದೂರವಿರುವಂತೆ ವಿವೇಕದ ಮಾತುಗಳನ್ನು ಹೇಳುತ್ತಾನೆ. ಆದರೆ ತಂಗಿಯ ಮಾತು ಕೇಳಿ ಮತ್ತೆ ಮಾರೀಚನಿಗೆ ಒಪ್ಪುವಂತೆ ಬಲಾತ್ಕರಿಸುತ್ತಾ, ಒಪ್ಪದಿದ್ದರೆ ಕೊಲ್ಲುವುದಾಗಿ ಬೆದರಿಸಿದ್ದರಿಂದ ರಾವಣನಿಂದ ಸಾಯುವುದಕ್ಕಿಂತ ರಾಮನ ಬಾಣಕ್ಕೆ ತುತ್ತಾಗಿ ಸಾಯುವುದೇ ಶ್ರೇಯಸ್ಕರ ಎಂದು ಭಾವಿಸಿದ ಮಾರೀಚನು ಮಾಯಾ ಜಿಂಕೆಯಾಗುತ್ತಾನೆ. ಈ ಘಟನೆಯಿಂದಾಗಿ ಶ್ರೀರಾಮನ ದುರ್ದೈವದ ದಿನಗಳು ಪ್ರಾರಂಭವಾದರೆ ರಾವಣ ಮತ್ತು ಲಂಕೆಯ ವಿನಾಶಕ್ಕೂ ನಾಂದಿಯಾಯಿತು ಎಂಬುದಾಗಿ ಪ್ರಸಿದ್ಧ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ನವಮ ಸೋಪಾನ ‘ರತ್ನಹರಿಣದ ಬೆನ್ನು ಹತ್ತಿ’ ಎಂಬ ವಿಷಯದ ಕುರಿತು ಸಪ್ಟಂಬರ್ 13ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.

ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಮತ್ತು ಅ.ಭಾ.ಸಾ.ಪ ಕಾರ್ಕಳ ಘಟದ ಉಪಾಧ್ಯಕ್ಷರಾದ ಏರ್‌ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು| ಶಾರ್ವರಿ ಪ್ರಾರ್ಥಿಸಿದರು. ಶ್ರೀಮತಿ ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಸುಲೋಚನಾ ಬಿ.ವಿ ವಂದಿಸಿದರು.

LEAVE A REPLY

Please enter your comment!
Please enter your name here