ಉಡುಪಿ : ಮಹರ್ಷಿ ವಾಲ್ಮೀಕಿ ವಿಶ್ವ ಕಂಡ ಶ್ರೇಷ್ಠ ಕವಿ. ತಮ್ಮ ಜ್ಞಾನದಿಂದ ಅತ್ಯಂತ ಶ್ರೇಷ್ಠ ಕಾವ್ಯವನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದಿ ಕವಿ ವಾಲ್ಮೀಕಿ ಮಹರ್ಷಿಗಳ ಜೀವನ ಎಲ್ಲರಿಗೂ ಪ್ರೇರಣೆ ನೀಡುತ್ತದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದೊಂದಿಗೆ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಭಗವಾನ್ ಶ್ರೀರಾಮ ಧರ್ಮದ ಪ್ರತಿಮೂರ್ತಿ. ರಾಮಾಯಣ ರಾಮನ ಆದರ್ಶಗಳನ್ನು ಸಾರುವ ಗ್ರಂಥ. ಇಡೀ ಜಗತ್ತಿನ ಮನಸನ್ನು ಗೆದ್ದ ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳ ಆಚಾರ-ವಿಚಾರಗಳನ್ನು ಇಂದಿನ ಯುವಜನತೆಗೆ ತಿಳಿಸಿಕೊಡುವ ಅಗತ್ಯವಿದೆ. ವಾಲ್ಮೀಕಿ ಮಹರ್ಷಿಗಳ ಹೆಸರಿನಲ್ಲಿ ಜಾರಿಯಾಗಿರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ನಡೆದು ಸಮಾಜದ ಉನ್ನತಿಯಾದಾಗ ವಾಲ್ಮೀಕಿ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಮತ್ತು ಅವರು ರಚಿಸಿದ ರಾಮಾಯಣದ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ,ಭಾರತೀಯ ಸಮಾಜದಲ್ಲಿ ಕಂಡುಬರುವ ಸರ್ವಶ್ರೇಷ್ಠ ಗ್ರಂಥಗಳೆಂದರೆ ಅದು ರಾಮಾಯಣ ಮತ್ತು ಮಹಾಭಾರತ. ಈ ಮಹಾಕಾವ್ಯಗಳು ಜಗತ್ತಿನ ಎಲ್ಲಾ ಕಾವ್ಯಗಳಿಗೆ ಪ್ರೇರಣಾದಾಯಿಯಾಗಿವೆ. ಮಹಾಭಾರತವು ಅಣ್ಣ ತಮ್ಮಂದಿರ ಮಧ್ಯದ ವೈಮನಸ್ಸನ್ನು ತೋರಿದರೆ ರಾಮಾಯಣವು ತ್ಯಾಗವೇ ಜೀವನ ಎನ್ನುವ ಮಹತ್ವದ ಸಂದೇಶವನ್ನು ಸಾರುತ್ತದೆ. ಇಂತಹ ಮಹಾನ್ ಗ್ರಂಥಗಳು ಜಗತ್ತಿನ ಎಲ್ಲಾ ಕುಟುಂಬಳಿಗೆ ಆದರ್ಶಪ್ರಾಯವಾಗಿದೆ. ರಾಮಾಯಣ ಸಾರ್ವಕಾಲಿಕವಾಗಿದ್ದು ಇಂದಿಗೂ ಪ್ರಸ್ತುತತೆ ಉಳಿಸಿಕೊಂಡಿದೆ. ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳ ಜೀವನದಿಂದಲೂ ನಾವೆಲ್ಲರೂ ಪ್ರೇರಣೆ ಪಡೆದು ಸಮಾಜವನ್ನು ಮುನ್ನಡೆಸಬಹುದು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ಅಂದು ವಾಲ್ಮೀಕಿ ಮಹರ್ಷಿಗಳು ವಿಶ್ವದ ಮೇರು ಕೃತಿಯಾದ ರಾಮಾಯಣವನ್ನು ರಚಿಸಿದರೆ ಇಂದಿನ ಕಾಲಘಟ್ಟದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸುವಲ್ಲಿ ಕೊಡುಗೆ ನೀಡಿದ್ದಾರೆ. ವಾಲ್ಮೀಕಿ ಮಹರ್ಷಿಗಳು ತಮ್ಮ ಪೂರ್ವಾಶ್ರಮದ ಅಸಾಮಾಜಿಕ ಕಾರ್ಯಗಳನ್ನು ತ್ಯಜಿಸಿ ಜ್ಞಾನಿಗಳಾಗಿ ಬದುಕಿ ಸಮಾಜಕ್ಕೆ ರಾಮಾಯಣವನ್ನು ನೀಡಿದಂತೆ ಯುವಕರೂ ಕೂಡಾ ಅಡ್ಡದಾರಿ ಹಿಡಿಯದೆ ಸಂವಿಧಾನದ ಚೌಕಟ್ಟಿನಲ್ಲಿ ಬದುಕಿ ಸಮಾಜಕ್ಕೆ ತಮ್ಮಿಂದಾಗ ಕೊಡುಗೆ ನೀಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಕ್ಕಿಂತಲೂ ಅವರ ವ್ಯಕ್ತಿತ್ವವನ್ನು ಪರಿವರ್ತಿಸಿ ಒಳ್ಳೆಯ ಬದುಕನ್ನು ನೀಡುವುದು ಸಂವಿಧಾನದ ಆಶಯ ಕೂಡಾ. ವಾಲ್ಮೀಕಿ ಮಹರ್ಷಿಗಳು ಪರಿವರ್ತನೆಯಿಂದ ಉನ್ನತಿಯ ಕಡೆಗಿನ ಅತ್ಯುತ್ತಮ ನಿದರ್ಶನ ಎಂದರು.
ವಾಲ್ಮೀಕಿ ಜಯಂತಿ ನಿಮಿತ್ತ ಕಾರ್ಕಳ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಸ್ವಾಗತಿಸಿ ವಂದಿಸಿದರು.