ಹಳೆಯಂಗಡಿ: ಹಳೆಯಂಗಡಿಯ ಜಂಕ್ಷನ್‌ನಿಂದ ಪಕ್ಷಿಕೆರೆ ಕಿನ್ನಿಗೋಳಿ ಕಡೆ ತೆರಳುವ ರಸ್ತೆಯು ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಓಡಾಡುವ ಈ ರಸ್ತೆಯಲ್ಲಿ ಬೃಹತ್ ಆಕಾರದ ಹೊಂಡಗಳು ಸೃಷ್ಟಿಯಾಗಿದ್ದು ವಾಹನ ಸಂಚಾರಕ್ಕೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಹಾಳಾಗಿದ್ದೂ ಅಲ್ಲದೆ ವಾಹನ ಸವಾರರು ಗುಂಡಿಗೆ ಬಿದ್ದು ದಿನನಿತ್ಯ ಅಪಘಾತ ಸಂಭವಿಸುತ್ತಲೇ ಇದೆ.
ಈ ಬಗ್ಗೆ ಅದೆಷ್ಟು ಬಾರಿ ಜನ ಪ್ರತಿನಿಧಿಗಳು ಹಾಗು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ. ಆ ಹಿನ್ನಲೆಯಲ್ಲಿ ನಿತ್ಯ ತೊಂದರೆ ಅನುಭವಿಸಿ ಬೇಸತ್ತ ಹಳೆಯಂಗಡಿಯ ಸಾರ್ವಜನಿಕರು ಡಾಂಬರ್ ಮಿಶ್ರಿತ ಜಲ್ಲಿ ಸಂಗ್ರಹಿಸಿ ತಾವೇ ರಸ್ತೆಗಿಳಿದು ಮಂಗಳವಾರ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾದರು.
ಹಳೆಯಂಗಡಿಯ ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತ ಟೆಂಪೋ ಬಸೀರ್ ಅವರ ನೇತೃತ್ವದಲ್ಲಿ ರಸ್ತೆಯ ದುರಸ್ತಿ ಕಾರ್ಯ ನಡೆಸಿದ್ದು, ಸ್ಥಳೀಯರಾದ ಗಣೇಶ್ ಕದಿಕೆ ಹಾಗೂ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಸಹಕಾರ ನೀಡಿದರು. ಸ್ಥಳೀಯರಾದ ವಾಮನ ಪೂಜಾರಿ, ಯೂಸುಫ್ ಕದಿಕೆ, ರಿಕ್ಷಾ ಚಾಲಕರಾದ ಮದನಿ ಮೋನು, ಅಹಮ್ಮದ್ ಬಾವ, ಕಾದರ್ ಕದಿಕೆ ಹಾಗೂ ಇತರರು ಈ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ವರದಿ: ಅದ್ದಿ ಬೊಳ್ಳೂರು