ದಾವಣಗೆರೆ- ಸಂಗಟನೆಗಳು ಅಷ್ಟು ಸುಲಭವಲ್ಲ ತಾಳ್ಮೆಯಿಂದ, ಸಹನೆಯಿಂದ ಮುಂದುವರಿದರೆ ಸಂಘ-ಸಂಸ್ಥೆಗಳು ಬೆಳವಣಿಗೆ ಆಗುತ್ತದೆ. ಎಲ್ಲರೂ ಸಂಕುಚಿತ ಭಾವನೆಗಳನ್ನು ಬಿಟ್ಟು ವಿಶಾಲವಾದ ಸೇವಾ ಮನೋಭಾವನೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡರೆ ಸಂಘಟನೆಗಳು ಸದೃಢವಾಗುತ್ತದೆ. ಈ ನಮ್ಮ ಸಮಾಜ ದಾವಣಗೆರೆಯಲ್ಲಿ ಕಳೆದ ಐವತ್ತು ವರ್ಷಗಳ ಹಿಂದೆ ಕೀರ್ತಿಶೇಷರಾದ ಪಾಂಡುರಂಗರಾವ್ ಶಿರೂರು, ಡಾ|| ಆರ್.ಎನ್.ಶೆಣೈ, ಜಿ.ಪಿ.ಕಾಮತ್, ಎಂ.ಜಿ.ಕಿಣಿ, ರಾಧಾಕೃಷ್ಣನಾಯಕ್ ಮುಂತಾದವರು ನಮ್ಮ ಸಮಾಜದ ಅಭಿವೃದ್ಧಿಗೆ ಸ್ವಯಂ ಸೇವೆ ಸಲ್ಲಿಸಿದವರನ್ನು ಸ್ಮರಿಸಲೇಬೇಕು ಎಂದು ಸಮಾಜದ ಹಿರಿಯ ಚೇತನ ದಾವಣಗೆರೆಯ ಬಿ.ಡಿ.ಟಿ. ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ|| ಕೋಟ ಮೋಹನ್‌ದಾಸ್ ಹೆಗಡೆಯವರು ದಾವಣಗೆರೆಯ ಗೌಡ ಸಾರಸ್ವತ ಸಮಾಜದ ೫೦ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಸಮಾಜದ ಲಾಂಛನವನ್ನು ಲೋಕಾರ್ಪಣೆ ಮಾಡಿ ತಮ್ಮ ಅಂತರಾಳದ ಭಾವನೆಯನ್ನು ವ್ಯಕ್ತಪಡಿಸಿದರು.
ದಾವಣಗೆರೆ ಎಂ.ಸಿ.ಸಿ.`ಎ’ ಬ್ಲಾಕ್‌ನಲ್ಲಿರುವ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ನಡೆದ ೫೦ನೇ ವರ್ಷದ ಶ್ರೀ ಗಣೇಶೋತ್ಸವದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಹೆಗಡೆಯವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಅಮಿತಾ ಡಾ. ವೇಣುಗೋಪಾಲ್ ಪೈ ಮಾತನಾಡಿ, ಈ ನಮ್ಮ ಸಮಾಜ ಯಾವುದೇ ಸಾರ್ವಜನಿಕ ದೇಣಿಗೆ ಇಲ್ಲದೇ ಸರ್ಕಾರದ, ಇಲಾಖೆಗಳ ಯಾವುದೇ ಅನುದಾನವಿಲ್ಲದೇ ನಮ್ಮ ಸಮಾಜ ಬಾಂಧವರು ತನು, ಮನ, ಧನಗಳಿಂದ ಸಹಕಾರ, ಸಹಯೋಗದೊಂದಿಗೆ ಅಭಿವೃದ್ಧಿಯಾಗುತ್ತಿರುವುದು ತುಂಬಾ ಸಂತೋಷದ ವಿಚಾರ ಮುಂದಿನ ದಿನಮಾನಗಳಲ್ಲಿ ಯುವ ಪಿಳಿಗೆಗಳು ನಮ್ಮ ಸಮಾಜ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕಾಗಿದೆ ಎಂದರು.
ಸಮಾಜದ ಮಾಜಿ ಅಧ್ಯಕ್ಷರಾದ ಕಿರಣ್ ಪಾಂಡುರಂಗ ವಾಲವಾಲ್ಕರ್, ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷರಾದ ಉಷಾ ಉದಯ ವಾಲವಾಲ್ಕರ್, ಸಮಾಜದ ಮಹಿಳಾ ವಿಭಾಗದ ಹಿರಿಯ ಚೇತನ ವಸಂತಿ ವಿಠಲ್‌ದಾಸ್ ಶೆಣೈ, ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ನಮ್ಮ ಈ ಶ್ರೀ ಸುಕೃತೀಂದ್ರ ಕಲಾಮಂದಿರ ಅಭಿವೃದ್ಧಿ, ನವೀಕರಣ ಮಾಡಿದ ಒಬ್ಬ ಮಹಿಳೆಯಾದ ಅಮಿತಾ ಪೈಯವರ ಕಠಿಣ ಪರಿಶ್ರಮ ಶ್ಲಾಘನೀಯ, ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮ ಆಧ್ಯಾತ್ಮಿಕ ಪರಂಪರೆಯ ದೇವರ ಸೇವೆಗೆ ಸಹಕರಿಸಿದ ಎಲ್ಲರಿಗೂ ಶುಭಾಶಯಗಳು ಎಂದರು.
ಕವಿತಾ ಕಿರಣ್ ವಾಲವಾಲ್ಕರ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶಾರದಾ ಕೃಷ್ಣಪ್ರಭು ಸ್ವಾಗತಿಸಿದರು. ಗೌಡ ಸಾರಸ್ವತ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರ ನಿರೂಪಣೆಯೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಇತಿಹಾಸ ಪರಂಪರೆಯನ್ನು ವಿವರಿಸಿ, ಕೊನೆಯಲ್ಲಿ ವಂದಿಸಿದರು.