ಏಕೀಕರಣ ಹೋರಾಟದಲ್ಲಿ ತುಳುವರ ತ್ಯಾಗ ಸ್ಮರಣೀಯ: ಡಾ.ಧನಂಜಯ ಕುಂಬ್ಳೆ

0
11

ಮಂಗಳೂರು: ಕರ್ನಾಟಕ ಏಕೀಕರಣ ಹೋರಾಟದಲ್ಲಿ ಕರಾವಳಿ ಭಾಗದ ನೇತಾರರಾಗಿದ್ದ ಕೆ.ಬಿ ಜಿನರಾಜ ಹೆಗ್ಡೆಯವರು 1928ರಲ್ಲಿ ಕಲ್ಕತ್ತಾದಲ್ಲಿ ನಡೆದ ಭಾಷಾವಾರು ಪ್ರಾಂತ್ಯ ರಚನೆಯ ಸಭೆಯಲ್ಲಿ ತುಳು ಮಹಾಸಭೆಯ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅವರು ಕರ್ನಾಟಕ ಏಕೀಕರಣಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದು ತುಳು ಕನ್ನಡದ ನಡುವಿನ ಬಾಂಧವ್ಯ ಬಲಗೊಳ್ಳಲು ಕಾರಣವಾಯಿತು. ಏಕೀಕರಣ ಹೋರಾಟದಲ್ಲಿ ತುಳುವರ ತ್ಯಾಗ ಸದಾ ಸ್ಮರಣೀಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಸಹಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು.

ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಹಾಗೂ ಲಯನ್ಸ್ ಕ್ಲಬ್ ಬೆಂದೂರ್ ವೆಲ್ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕನ್ನಡ ಭಾಷೆ ಸಂಸ್ಕೃತಿಗೆ ಭವ್ಯ ಇತಿಹಾಸವಿದೆ. ಇನ್ನೊಂದು ಧರ್ಮ, ಇನ್ನೊಬ್ಬರ ವಿಚಾರವನ್ನು ಗೌರವಿಸುವ ಕನ್ನಡದ ವಿವೇಕ ಸದಾ ಜಾಗೃತವಾಗಿರಲಿ. ಶಿಕ್ಷಣದಲ್ಲಿ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಕನ್ನಡದ ಬಗೆಗೆ ಗೌರವ ಆಸಕ್ತಿ ಕಡಿಮೆಯಾಗುತ್ತಿರುವುದು ಖೇದಕರ ಎಂದರು.

ಕನ್ನಡ ಕಟ್ಟೆ ಮಂಗಳೂರು ಇದರ ಅಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಹೋರಾಟಗಳ ಮೂಲಕ ಕರಾವಳಿಯಲ್ಲಿ ಕನ್ನಡವನ್ನು ಬೆಳೆಸಿದ್ದನ್ನು ವಿವರಿಸಿದರು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡದ ಪರಂಪರೆ ಮತ್ತು ವರ್ತಮಾನವನ್ನು ಅರ್ಥಮಾಡಿಕೊಂಡು ಕನ್ನಡಾಭಿಮಾನವನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.

ಸಮಾರಂಭದಲ್ಲಿ ದ.ಕ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಲಯನ್ ನಾಗೇಶ್ ಕುಮಾರ್ ಎನ್ ಜೆ, ಕಸಾಪ ಕೇಂದ್ರ ಸಮಿತಿ‌ ಸದಸ್ಯ ಡಾ.ಮಾಧವ ಎಂಕೆ, ಮಂಗಳೂರು ಕಸಾಪ ಘಟಕದ ಅಧ್ಯಕ್ಷರಾದ ಮಂಜುನಾಥ ಎಸ್ ರೇವಣ್ ಕರ್, ದ.ಕ ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ, ಲ ಚಂದ್ರಹಾಸ ಶೆಟ್ಟಿ, ಸನತ್ ಕುಮಾರ್ ಜೈನ್ ಮತ್ತಿತರರು ಭಾಗವಹಿಸಿದ್ದರು. ಬಳಿಕ ಯು.ಎಚ್ ಖಾಲಿದ್ ಉಜಿರೆ ಬಳಗದಿಂದ ಕನ್ನಡ ಗೀತಾಂಜಲಿ ಕಾರ್ಯಕ್ರಮ ನಡೆಯಿತು.
ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಕೆ‌ ಸ್ವಾಗತಿಸಿದರು. ಸಂಧ್ಯಾ‌ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here