ರಾಯಚೋಟಿ: 2013ರಲ್ಲಿ ನಡೆದ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಸ್ಫೋಟ ಪ್ರಕರಣ ಸಂಬಂಧ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಬಂಧಿಸಲ್ಪಟ್ಟ ಉಗ್ರ ಅಬೂಬಕ್ಕರ್ ಸಿದ್ದಿಕಿ ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ‘ಮೀನು’. ಆತ ಎಲೆಕ್ಟ್ರಾನಿಕ್ ಉಪಕರಣ, ಟೈಮರ್‌ಗಳನ್ನು ಬಳಸಿಕೊಂಡು ಸುಧಾರಿತ ಸ್ಫೋಟಕ (ಐಇಡಿ) ತಯಾರಿಯಲ್ಲಿ ಸ್ಪೆಷಲಿಸ್ಟ್ ಆಗಿದ್ದ ಎಂಬ ಸ್ಫೋಟಕ ವಿಷಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕರ್ನೂಲ್‌ನ ಡಿಐಜಿ ಕೋಯಾ ಪ್ರವೀಣ್, ‘ಸಿದ್ದಿಕಿ ಒಂಟಿ ತೋಳದಂತೆ ಕಾರ್ಯನಿರ್ವಹಿಸುತ್ತಿದ್ದ. ತನ್ನ ಮೂಲಭೂತವಾದಿ ಸಿದ್ಧಾಂತವನ್ನು ಹಂಚಿಕೊಂಡವರಿಗೆ ತನ್ನ ಉಗ್ರತನದ ಪರಿಣತಿಯನ್ನು ಹೇಳಿಕೊಡುತ್ತಿದ್ದ. ಮೂಲಭೂತವಾದಿ ಇಸ್ಲಾಮಿಕ್ ಪ್ರಚಾರಕ ಜಾಕೀರ್ ನಾಯಕ್ ಮತ್ತು ವಿಶ್ವದ ಕುಖ್ಯಾತ ಉಗ್ರ ಸಂಘಟನೆಗಳ ಪೈಕಿ ಒಂದಾದ ಐಸಿಸ್‌ನಿಂದ ಪ್ರಭಾವಿತನಾಗಿದ್ದ. ನಾವು ಹಿಡಿದ ಈ ಮೀನು (ಸಿದ್ದಿಕಿ) ನಾವು ಊಹಿಸಿದ್ದಕ್ಕಿಂತ ತುಂಬಾ ದೊಡ್ಡದು. ಈತ ದೇಶದ ಉದ್ದಗಲಕ್ಕೂ ಪ್ರಯಾಣಿಸಿದ್ದ. ಆಗಾಗ ಕೊಲ್ಲಿ ದೇಶಗಳಿಗೂ ಹೋಗುತ್ತಿದ್ದ’ ಎಂದು ಹೇಳಿದ್ದಾರೆ.
ಜೊತೆಗೆ, ‘ಝಾಕೀರ್ ನಾಯಕ್ ಸಿದ್ದಿಕಿಯ ಚಿಂತನೆಯಿಂದ ಪ್ರಭಾವಿತನಾಗಿದ್ದ ಈತ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ), ಎಲೆಕ್ಟ್ರಾನಿಕ್ ಸಾಧನಗಳು, ಟೈಮರ್ ಸ್ಫೋಟಕಗಳು ಹಾಗೂ ಮಾರಕ ವಸ್ತುಗಳನ್ನು ತಯಾರಿಸುವಲ್ಲಿ ಪರಿಣತನಾಗಿದ್ದ. ಈತ 2013ರ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಸ್ಫೋಟ ಸೇರಿ ಹಲವು ಉಗ್ರಕೃತ್ಯಗಳನ್ನು ನಡೆಸಿದ್ದ. 2011ರಲ್ಲಿ ತಮಿಳುನಾಡಿನ ಮದುರೈನಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿಯವರ ಹತ್ಯೆಗೆ ಪೈಪ್ ಬಾಂಬ್ ಮೂಲಕ ಸಂಚು ರೂಪಿಸಿದ್ದ’ ಎಂದು ಪ್ರವೀಣ್ ಮಾಹಿತಿ ಹಂಚಿಕೊಂಡಿದ್ದಾರೆ.