ವರದಿ ÷ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ
 ತುಳುನಾಡು ÷ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಯಕ್ಷಗಾನಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಇಂತಹ ಕಲಾ ಪ್ರಕಾರಕ್ಕೆ ಜೈನ ಧರ್ಮದ ಸತ್ವ ಮತ್ತು ಸೌಂದರ್ಯವನ್ನು ಬೆರೆಸಿ, 22ಕ್ಕೂ ಹೆಚ್ಚು ಮಹತ್ವದ ಪ್ರಸಂಗಗಳನ್ನು ನೀಡಿ ಅಜರಾಮರಾದವರು ದಿವಂಗತ ಶ್ರೀಧರ ಪಾಂಡಿ ಸಾಣೂರು. ಅವರ ಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಕಲಾಭಿಮಾನಿಗಳಿಗೆ ಒಂದು ಭಾವನಾತ್ಮಕ ಕ್ಷಣವಾಗಿತ್ತು. ಸಾಣೂರು ಅವರ ಆಚಾರ-ವಿಚಾರಗಳನ್ನು ಮತ್ತು ಕಲಾ ಸೇವೆಯನ್ನು ನೆನಪಿಸಿಕೊಳ್ಳುವ ಮೂಲಕ, ಮೂಡುಬಿದಿರೆ ಜೈನ ಕಾಶಿಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮ ದಿವಂಗತ ಪಾಂಡಿಯವರ ಸಾವಿರದ ನೆನಪು ಗಳನ್ನು ಮತ್ತೆ ನೆನಪಿಸುವಲ್ಲಿ ಯಶಸ್ವಿಯಾಯಿತು.

ದಿನಾಂಕ 02-11-2025 ರಂದು ಮೂಡುಬಿದಿರೆಯ ಪ್ರಸಿದ್ಧ ಜೈನ ಕ್ಷೇತ್ರ ಸಾವಿರ ಕಂಬದ ಬಸದಿ ಆವರಣದಲ್ಲಿ ಜೈನ ಪರಂಪರೆಯ ಶ್ರೇಷ್ಠ ಸಾಹಿತಿ ಮತ್ತು ಯಕ್ಷಗಾನ ಪ್ರಸಂಗಕರ್ತ ದಿವಂಗತ ಶ್ರೀಧರ ಪಾಂಡಿ ಸಾಣೂರು ಇವರ 14ನೇ ಸಂಸ್ಮರಣಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ನೆರವೇರಿತು.
”ಸಾವಿರದ ನೆನಪು” ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ ನಡೆದ ಈ ಸಮಾರಂಭದಲ್ಲಿ, ದಿವಂಗತ ಸಾಣೂರು ಅವರು ಜೈನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಜನರಿಗೆ ಪರಿಚಯಿಸಲು ಬರೆದ 22ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳ ಸೇವೆಯನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಲಾಯಿತು.
ಕಲಾ ಸೇವೆಯನ್ನು ಸ್ಮರಿಸಿದ ಗಣ್ಯರು:
ಕಾರ್ಯಕ್ರಮವನ್ನು ಉದ್ಘಾಟಿಸಿದ ಗಣ್ಯರು, ಶ್ರೀಧರ ಪಾಂಡಿ ಸಾಣೂರು ಅವರ ಜೈನ ಪರಂಪರೆಯ ಯಕ್ಷಗಾನದ ಪ್ರಸಂಗಗಳು ರಂಗಭೂಮಿಗೆ ಹೊಸ ದೃಷ್ಟಿಕೋನವನ್ನು ನೀಡಿದವು ಎಂದು ಹೇಳಿದರು. ಅವರ ಕೊಡುಗೆ ಅಮೂಲ್ಯವಾದುದು ಮತ್ತು ಅವರ ಪ್ರಸಂಗಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿ ಮತ್ತು ಗೌರವ:
ಈ ಸಂದರ್ಭದಲ್ಲಿ, ದಿವಂಗತ ಸಾಣೂರು ಅವರ ಸ್ಮರಣಾರ್ಥ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯನ್ನು ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಕಣಿಯೂರು ಲಕ್ಷ್ಮೀನಾರಾಯಣ ಭಟ್ ಇವರಿಗೆ ನೀಡಿ ಗೌರವಿಸಲಾಯಿತು.
ಈ ಮಹತ್ವದ ಸಮಾರಂಭದಲ್ಲಿ ಮೂಡುಬಿದಿರೆ ಜೈನ ಮಠದ ಪೂಜ್ಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ನಾಡಿನ ವಿವಿಧ ಭಾಗಗಳ ಕಲಾಭಿಮಾನಿಗಳು, ಯಕ್ಷಗಾನ ಕಲಾವಿದರು ಮತ್ತು ಸಾಹಿತಿಗಳು ಪಾಲ್ಗೊಂಡು ದಿವಂಗತ ಶ್ರೀಧರ ಪಾಂಡಿ ಸಾಣೂರು ಅವರ ಗೌರವ ಸ್ಮರಣೆ ಮಾಡಿದರು.
ವಿಶೇಷ ಆಕರ್ಷಣೆಯಾಗಿ, ಎಂ. ಶ್ರೀಧರ ಪಾಂಡಿ ಸಾಣೂರು ಅವರು ರಚಿಸಿದ ಪ್ರಸಂಗ ಶ್ರೀ ಪಾರ್ಶ್ವನಾಥ ಚರಿತೆ ಯನ್ನು ದೊಂದಿ ಬೆಳಕಿನಲ್ಲಿ ಯಾವುದೇ ಆಧುನಿಕ ವರ್ಷವಿಲ್ಲದೆ ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು

