ಮಂಗಳೂರು: ಪದವು ಫ್ರೆಂಡ್ಸ್ ಕ್ಲಬ್ ಕಾನಡ್ಕ ಶಕ್ತಿನಗರ ಇದರ 50ನೇ ವಾರ್ಷಿಕೋತ್ಸವ ‘ಸ್ವರ್ಣ ಸಂಭ್ರಮ’ ಸಮಾರಂಭವು ಫೆಬ್ರವರಿ 13 ರಿಂದ 17ರ ವರೆಗೆ ಜರಗಿತು. ನಾಲ್ಕನೇ ದಿನದ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ, ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಸಂಘ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಮಾಜೋಪಯೋಗಿ ಕೆಲಸಗಳಲ್ಲಿಯೂ ತೊಡಗಿಕೊಂಡಾಗ ಅದು ಜನಮಾನಸಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಪದವು ಫ್ರೆಂಡ್ಸ್ ಕ್ಲಬ್ ಕಳೆದ ಐದು ದಶಕಗಳ ಸಾರ್ಥಕ ಸೇವಾ ಕಾರ್ಯಗಳಿಂದಾಗಿ ತನ್ನ ಪರಿಸರದ ಜನರ ಅಭಿಮಾನ ಗಳಿಸಿಕೊಂಡಿರುವುದು ಸ್ಪಷ್ಟ. ಆ ಕಾರಣದಿಂದಾಗಿ ಅದರ ಸುವರ್ಣ ಸಂಭ್ರಮ ಪ್ರಸ್ತುತ ನಾಡಹಬ್ಬದ ಸ್ವರೂಪ ಪಡೆದಿರುವುದು ಕಂಡು ಬರುತ್ತಿದೆ’ ಎಂದರು.

ಸನ್ಮಾನ – ಬಿರುದು ಪ್ರದಾನ:
ಸಮಾರಂಭದಲ್ಲಿ ತುಳು ರಂಗಭೂಮಿಯ ಖ್ಯಾತ ನಾಟಕಕಾರರು ಮತ್ತು ಚಲನಚಿತ್ರ ನಿರ್ದೇಶಕರಾದ ಡಾ.ದೇವದಾಸ ಕಾಪಿಕಾಡ್ ಅವರಿಗೆ ‘ತೆಲಿಕೆದ ಐಸಿರಿ’ ಮತ್ತು ವಿಜಯಕುಮಾರ್ ಕೊಡಿಯಾಲಬೈಲ್ ಅವರಿಗೆ ‘ಕಲಾ ಶಕ್ತಿ’ ಬಿರುದು ಪ್ರದಾನ ಮಾಡಿ ಸನ್ಮಾನಿಸಲಾಯಿತು. ಸ್ವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಜಾನ್ಸನ್ ಮತ್ತು ಸ್ಥಾಪಕ ಸದಸ್ಯರಿಗೆ ಅಭಿನಂದನಾ ಗೌರವ ಸಲ್ಲಿಸಲಾಯಿತು.
ಸ್ವರ್ಣ ಸಂಭ್ರಮ ಸಮಿತಿ ಗೌರವಾಧ್ಯಕ್ಷರಾದ ರತ್ನಾಕರ ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯೆ ಶಕೀಲಾ ಕಾವ, ಕರ್ನಾಟಕ ಜೋಗಿ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಸ್ವರ್ಣ ಸಂಭ್ರಮ ಸಮಿತಿ ಉಪಾಧ್ಯಕ್ಷ ಭಾಸ್ಕರ್ ಕಣಂತೂರು ಮೊದಲಾದವರು ಅತಿಥಿಗಳಾಗಿದ್ದರು. ಪದವು ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಅಧ್ಯಕ್ಷ ಕುಶಾಲ್ ಕುಮಾರ್ ಕೆ. ಮತ್ತು ಸ್ವರ್ಣ ಸಂಭ್ರಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಆಂತರಿಕ ಲೆಕ್ಕ ಪರಿಶೋಧಕ ರವೀಂದ್ರ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮಿತಿ ಸಂಚಾಲಕ ಹರೀಶ್ ಕೆ. ಜೋಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ವಿಧಾತ್ರಿ ತಂಡದ ಕಲಾವಿದರಿಂದ ‘ಜೈ ಹನುಮಾನ್’ ನಾಟಕ ಪ್ರದರ್ಶನ ಜರಗಿತು.

