ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಮಂಡಳಿಯ ನೇತೃತ್ವದಲ್ಲಿ ನಡೆದ “ಚಕ್ರವ್ಯೂಹ” “ಭಕ್ತಪ್ರಹ್ಲಾದ” ಪೌರಾಣಿಕ ಕಥಾನಕದ ಪ್ರದರ್ಶನವನ್ನು ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಗಡಿಯಾರ ಗೋಪುರದ ಹತ್ತಿರವಿರುವ ಶ್ರೀ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಸಭಾಂಗಣದಲ್ಲಿ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಖ್ಯಾತ ಯಕ್ಷಗಾನ ಭಾಗವತರಾದ ರಸರಾಗ ಚಕ್ರವರ್ತಿ, ಶ್ರೀ ಜಿ.ರಾಘವೇಂದ್ರ ಮಯ್ಯ ಮಾತನಾಡಿ ಇತ್ತೀಚಿನ ಹೊಸ ಹೊಸ ತಂತ್ರಜ್ಞಾನದ ಚಟುವಟಿಕೆಗಳಲ್ಲಿ ನಮ್ಮ ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ ಅಪ್ಪಟ ಕನ್ನಡ ಜನಪದ ಪುರಾತನ ಇತಿಹಾಸದ ಆರಾಧನಾ ಕಲೆಯ ಯಕ್ಷಗಾನ ಪ್ರದರ್ಶನ ಕೇವಲ ಮನರಂಜನೆಗೆ ಸೀಮಿತವಾಗದೆ ಹೊಸ ಪೀಳಿಗೆಗಳಿಗೆ ಆರಾಧನಾಕಲೆ ಯಕ್ಷಗಾನ ಅರಿವು ಮೂಡಿಸುವ ಅಗತ್ಯವಿದೆ. ದೇವರ ಸೇವೆ, ಪೂಜೆಯೂ ಹೌದು. ವಾಣಿಜ್ಯ ನಗರಿ ದೇವನಗರಿಯಲ್ಲಿ ಈ ಯಕ್ಷಗಾನ ಕಲೆಯನ್ನು ಮೊಟ್ಟಮೊದಲು 5 ದಶಕಗಳಿಂದ ಪರಿಚಯಿಸಿದ್ದು ದಾವಣಗೆರೆಯ ಯಕ್ಷರಂಗ ಸಂಸ್ಥೆಯ ಹೆಗ್ಗಳಿಕೆ ಎಂದರು.
ಸಮಾರAಭದ ಅಧ್ಯಕ್ಷತೆಯನ್ನು ವಹಿಸಿದ ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ಮಾತನಾಡಿ, ಯಕ್ಷಾಭಿಮಾನಿಗಳ ಸಹಕಾರ, ಸಹಯೋಗದೊಂದಿಗೆ ಈ ಯಕ್ಷಗಾನ ಪ್ರದರ್ಶನ ವರ್ಷಂಪ್ರತಿ ಸುಸಂಪನ್ನಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಮಾತನಾಡಿ, ದೇಶ, ವಿದೇಶಗಳಲ್ಲಿ ಈ ಆರಾಧನ ಕಲೆಯನ್ನು ಕನ್ನಡ ಭಾಷೆಯನ್ನು ವೈಭವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನಾಡಿನ ಖ್ಯಾತ ಯಕ್ಷರಂಗ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ, ಕಲಾಕುಂಚ, ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷರಂಗದ ಪ್ರಧಾನ ಕಾರ್ಯದರ್ಶಿ, ಹವ್ಯಾಸಿ ಯಕ್ಷಗಾನ ಕಲಾವಿದರಾದ ಬೇಳೂರು ಸಂತೋಷ್ ಕುಮಾರ ಶೆಟ್ಟಿ ಸಮಾರಂಭದಲ್ಲಿ ಸ್ವಾಗತಿಸಿ ಅಚ್ಚುಕಟ್ಟಾಗಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.