ಪ್ರತ್ಯರ್ಪಣಕ್ಕಿಂತಲು ದೊಡ್ಡ ಧರ್ಮವಿಲ್ಲ – ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು

0
15

ಉಡುಪಿ : ಯಕ್ಷಗಾನ ಕಲಾರಂಗ (ರಿ.), ಉಡುಪಿ ಇದರ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕಳೆದ 20 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದು, ಈ ವರ್ಷ 1234 ವಿದ್ಯಾರ್ಥಿಗಳಿಗೆ 1,38,68,000/- ರೂಪಾಯಿ ವಿದ್ಯಾರ್ಥಿವೇತನವನ್ನು ಅಕ್ಟೋಬರ್ 05, 2025 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿತರಿಸಲಾಯಿತು.

ಪ್ರತ್ಯರ್ಪಣ ಗುಣದಿಂದಲೇ ಜಗತ್ತಿನ ಚಲನೆ ನಡೆಯುತ್ತದೆ. ಪಡೆದ ಸಹಾಯವನ್ನು ದಾನದ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಿದರೆ ಬದುಕು ಸಾರ್ಥಕವಾಗುತ್ತದೆ. ಶ್ರದ್ಧೆ ಮತ್ತು ನಂಬಿಕೆ ನಮ್ಮ ಬದುಕನ್ನು ರೂಪಿಸುತ್ತದೆ ಎಂದು ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ವಿದ್ಯೆ ಅಮೂಲ್ಯವಾದ ಸಂಪತ್ತು. ಶ್ರದ್ಧೆಯಿಂದ ಅದನ್ನು ಆರ್ಜಿಸಿಕೊಳ್ಳಬೇಕೆಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 25 ವಿದ್ಯಾರ್ಥಿಗಳಿಗೆ ಚೆಕ್ ಮತ್ತು 10 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪನ್ನು ವಿತರಿಸಲಾಯಿತು. ಅಭ್ಯಾಗತರಾಗಿ ಶಾಸಕರುಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‍ಪಾಲ್ ಎ. ಸುವರ್ಣ ಹಾಗೂ ಆನಂದ ಸಿ. ಕುಂದರ್, ಗಿರೀಶ್ ಭಟ್, ಶ್ರೀಪತಿ ಭಟ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಸುಗ್ಗಿ ಸುಧಾಕರ್ ಶೆಟ್ಟಿ, ಹರೀಶ್ ರಾಯಸ್, ಅರುಣ್‍ಕುಮಾರ್ ಶೆಟ್ಟಿ, ಆನಂದ ಪಿ. ಸುವರ್ಣ, ಅಶೋಕ್ ನಾಯಕ್ ಭಾಗವಹಿಸಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಕರ್ತರನ್ನು ಸಭೆಗೆ ಪರಿಚಯಿಸಿದರು. ಮನೆ ಫಲಾನುಭವಿ ವಿದ್ಯಾರ್ಥಿಗಳು ಸಂಸ್ಥೆಗು, ಮನೆಯ ಪ್ರಾಯೋಜಕತ್ವ ವಹಿಸಿದ ದಾನಿಗಳಿಗು ಕೃತಜ್ಞತೆ ಸೂಚಿಸಿ ಸ್ವಪರಿಚಯ ಮಾಡಿಕೊಂಡರು. ಈಗ ಉದ್ಯೋಗ ಪಡೆದ ಫಲಾನುಭವಿಗಳು ಸಂಸ್ಥೆ ತಮಗೆ ನೀಡಿದ ನೆರವು ತಮ್ಮ ಬದುಕನ್ನು ರೂಪಿಸುವಲ್ಲಿ ಅದು ವಹಿಸಿದ ಪಾತ್ರವನ್ನು ಸ್ಮರಿಸಿಕೊಂಡರು.ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಹಿರಿಯ ಕಾರ್ಯಕರ್ತ ಯು. ಎಸ್ ರಾಜಗೋಪಾಲ ಆಚಾರ್ಯರು ಪ್ರತಿಜ್ಜಾವಿಧಿ ಬೋಧಿಸಿದರು. ಕೋಶಾಧಿಕಾರಿ ಪ್ರೊ. ಕೆ ಸದಾಶಿವ ರಾವ್ ವಂದಿಸಿದರು. ಕಾರ್ಯದರ್ಶಿ ಸಂಸ್ಥೆಯ ಕಾರ್ಯಕರ್ತರ ಅರ್ಪಣಾ ಮನೋಭಾವ, ಮಠಾಧೀಶರ ಅನುಗ್ರಹ ಮಂತ್ರಾಕ್ಷತೆ, ಸಹೃದಯಿ ದಾನಿಗಳ ಉದಾರತೆಯಿಂದ ಇಷ್ಟೊಂದು ದೊಡ್ಡ ಮೊತ್ತ ನೀಡಲು ಸಾಧ್ಯವಾಗಿದೆ. ಒಳ್ಳೆಯ ಕೆಲಸಕ್ಕೆ ಸ್ಪಂದಿಸುವ ಸಜ್ಜನರು ಸಮಾಜದಲ್ಲಿದ್ದಾರೆ ಎಂಬುದಕ್ಕೆ ನಮ್ಮ ಸಂಸ್ಥೆ ಸಾಕ್ಷಿ ಎಂಬ ಮಾತನ್ನು ಉಲ್ಲೇಖಿಸುತ್ತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here