ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಸಕ್ತ ಸಾಲಿನಲ್ಲಿ ನೀಡಿರುವ ಕನ್ನಡ ರಾಜ್ಯೋತ್ಸವ ಜಿಲ್ಲಾಮಟ್ಟದ ಪ್ರಶಸ್ತಿ ಬಗ್ಗೆ ಪುರಸ್ಕೃತರಿಂದಲೇ ಅಪಸ್ವರ ಕೇಳಿಬಂದಿದೆ. ಜಿಲ್ಲಾಡಳಿತವು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿಯನ್ನು 2025 ನವೆಂಬರ್ ಒಂದರಂದು ಮಂಗಳೂರಿನಲ್ಲಿ ಪ್ರದಾನ ಮಾಡಿದ್ದು; ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ, ಕಮಿಷನರ್ ಸಹಿತ ಜನಪ್ರತಿನಿಧಿಗಳು ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಆದರೆ ಪ್ರಶಸ್ತಿ ಕಾಟಾಚಾರಕ್ಕೆ ಎಂಬಂತೆ ನೀಡಲಾಗಿದೆ ಎಂಬುದು ಪ್ರಶಸ್ತಿ ಪುರಸ್ಕೃತರ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸ್ಕೃತರಿಗೆ ಶಾಲು ಫಲ ವಸ್ತು ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗಿದೆ. ಪ್ರಶಸ್ತಿ ಪತ್ರವನ್ನು ಬಹುಮಾನ ವಿಜೇತರಿಗೆ ನೀಡಲಾಗುವ ಪ್ರಶಸ್ತಿ ಪತ್ರದ ರೀತಿಯಲ್ಲಿ ಯಾವುದೇ ಒಂದು ಫ್ರೇಮ್ ಅಳವಡಿಸದೆ ನೀಡಲಾಗಿರುವುದು ಜಿಲ್ಲಾ ಪ್ರಶಸ್ತಿಯ ಮಹತ್ವವನ್ನು ಪ್ರಶ್ನಿಸಿದಂತಾಗಿದೆ. ಅಲ್ಲದೆ ಈ ಪ್ರಶಸ್ತಿಯಲ್ಲಿ ಕನ್ನಡ ರಾಜ್ಯೋತ್ಸವದ ಹೆಸರನ್ನು ಉಲ್ಲೇಖ ಮಾಡದೆ ಕೇವಲ ಜಿಲ್ಲಾ ಪ್ರಶಸ್ತಿ ಪತ್ರ ಎಂಬುದಾಗಿ ಉಲ್ಲೇಖಿಸಿರುವುದು ಕೂಡ ಪುರಸ್ಕೃತರ ಬೇಸರಕ್ಕೆ ಕಾರಣವಾಗಿದೆ.
ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ಉತ್ತರವನ್ನು ನೀಡುವಂತೆಯೂ ಪ್ರಶಸ್ತಿ ಪುರಸ್ಕೃತರು ಹಾಗೂ ಅವರ ಅಭಿಮಾನಿಗಳು ಕೋರಿದ್ದಾರೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಡಳಿತವೇ ಪ್ರಶಸ್ತಿಯನ್ನು ನೀಡುವಾಗ ಸರಿಯಾದ ರೀತಿಯಲ್ಲಿ ಗೌರವ ಅರ್ಪಿಸದಿದ್ದಲ್ಲಿ ಈ ಪ್ರಶಸ್ತಿಗೆ ಯಾವ ಮಹತ್ವ ಇದೆ ಅನ್ನೋದೇ ತಿಳಿಯದಂತಾಗಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯಾವ ಮಾನದಂಡದಲ್ಲಿ ನೀಡಲಾಗುತ್ತದೆ ಮತ್ತು ಪುರಸ್ಕೃತರಿಗೆ ಹೇಗೆ ಗೌರವವನ್ನು ಕೊಟ್ಟಂತಾಗುತ್ತದೆ ಎಂಬುದು ಕೂಡ ಪ್ರಶ್ನಾರ್ಹ ವಿಷಯವೇ ಆಗಿದೆ.

