ಕುಂದಾಪುರ: ಹಿಂದೂ ಕಾರ್ಯಕರ್ತೆ ಹಾಗೂ ಬಿಗ್‌ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿಗ್‌ಬಾಸ್ ಬಳಿಕ ಅವರು ಕೆಲ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಸದ್ಯ ಈಗ ತಮ್ಮ ಪತಿಯೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಫೋಟೋಗಳನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಚೈತ್ರಾ, ದಿಢೀರನೆ ಗರಂ ಆಗಿದ್ದಾರೆ. ಈ ಬಗ್ಗೆ ಇನ್‌ಸ್ಟಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಚೈತ್ರಾ ಅವರ ಕೋಪಕ್ಕೆ ಕಾರಣವಾಗಿದ್ದು ಏನು ಗೊತ್ತಾ?
ಈ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಬರುವ ಎಷ್ಟೋ ವಿಚಾರಗಳು ನಿಜ ಆಗಿರುವುದಿಲ್ಲ. ಆದರೂ ಜನ ಅಲ್ಲಿ ಬರುವುದನ್ನೆಲ್ಲ ನಿಜ ಎಂದೇ ನಂಬುವವರೂ ಇದ್ದಾರೆ. ಇದೇ ರೀತಿ ಚೈತ್ರಾ ಅವರ ವಿಚಾರದಲ್ಲೂ ಒಂದು ಎಡವಟ್ಟಾಗಿದೆ. ಚೈತ್ರಾ ಅವರ ಬಗ್ಗೆ ಸುಳ್ಳುಸುದ್ದಿಯೊಂದನ್ನು ಹಬ್ಬಿಸಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೆಲವೇ ತಿಂಗಳಲ್ಲಿ ಚೈತ್ರಾ ಸಿಹಿಸುದ್ದಿ ನೀಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದು, ಇದರ ಸ್ಕ್ರೀನ್‌ಶಾಟ್ ಹಂಚಿಕೊಂಡು ಚೈತ್ರಾ ಅವರು ಗುಡುಗಿದ್ದಾರೆ. ಈ ಸುದ್ದಿ ಫೇಕ್ ಎಂದೂ ಚೈತ್ರಾ ಕ್ಲಾರಿಟಿ ಕೊಟ್ಟಿದ್ದಾರೆ.
ಕ್ಲಿಕ್ ಬೈಟ್‌ಗಾಗಿ ಸುಳ್ಳು ಸುದ್ದಿ!
“ಕ್ಲಿಕ್ ಬೈಟ್‌ನ ಆಸೆಗೆ ಕಂಡವರ ಮನೆಯ ಖಾಸಗಿ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಇಂತಹ ಲೋ ಕ್ಲಾಸ್ ವೆಬ್‌ನ್ಯೂಸ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಬರಬೇಕು ಎಂದು ಚೈತ್ರಾ ಒತ್ತಾಯಿಸಿದ್ದಾರೆ. ಇವರ ಲಾಲಸೆಗೆ ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಇವರು ಹರಡಿಸುವ ಸುದ್ದಿಗಳು, ನಮ್ಮ ಮತ್ತು ನಮ್ಮ ಕುಟುಂಬದವರ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎನ್ನುವ ಚಿಕ್ಕ ಕಲ್ಪನೆಯೂ ಇರಲಿಕ್ಕಿಲ್ಲ. ಇತ್ತೀಚೆಗೆ ಇಂತಹ ಮುಖ ತೋರಿಸದೆ ಸುಳ್ಳು ಹಬ್ಬಿಸುವ ಯೂಟ್ಯೂಬ್ ಚಾನೆಲ್‌ಗಳಿಗೆ ಕಡಿವಾಣ ಹಾಕಲು ಸ್ವತಃ ಯೂಟ್ಯೂಬ್ ಕೂಡ ಮುಂದಾಗಿತ್ತು. ವ್ಯವಸ್ಥೆ ಕೂಡ ಅದೇ ದಿಕ್ಕಿನಲ್ಲಿ ಯೋಚಿಸಬೇಕು” ಎಂದು ಬರೆದುಕೊಂಡಿದ್ದಾರೆ.