ಉಡುಪಿ: ತೊಟ್ಟಂ ಸಾರ್ವಜನಿಕ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾದ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ತೊಟ್ಟಂ ಸಮನ್ವಯ ಸರ್ವ ಧರ್ಮ ಸಮಿತಿ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯ ಸದಸ್ಯರು ಸೌಹಾರ್ಧ ಭೇಟಿ ನೀಡಿದರು.
ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ಹಾಗೂ ಸಮನ್ವಯ ಸರ್ವ ಧರ್ಮ ಸಮಿತಿ ಅಧ್ಯಕ್ಷ ರಮೇಶ್ ತಿಂಗಳಾಯ ನಿಯೋಗದ ನೇತೃತ್ವ ವಹಿಸಿದ್ದರು.
ಈ ವೇಳೆ ಮಾತನಾಡಿದ ಧರ್ಮಗುರು ವಂ.ಡೆನಿಸ್ ಡೆಸಾ, ತೊಟ್ಟಂ ಪರಿಸರ ಸರ್ವ ಧರ್ಮಗಳ ಸೌಹಾರ್ದತೆಯ ತಾಣವಾಗಿದ್ದು ಪ್ರತಿವರ್ಷ ಸಮಿತಿಯ ಸದಸ್ಯರೊಡಗೂಡಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪರಸ್ಪರ ಸಹೋದರರಂತೆ ಭಾಗಿಯಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅಲ್ಲದೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರೂ ಕೂಡ ಚರ್ಚಿನ ವಿವಿಧ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಾರೆ. ಈ ಮೂಲಕ ಸೌಹಾರ್ದತೆ ಕೇವಲ ಬಾಯಿ ಮಾತಿಗೆ ಸೀಮಿತವಾಗಿರದೆ ಕೃತಿಯ ಮೂಲಕ ತೋರ್ಪಡಿಸಿದ್ದಾರೆ. ಚರ್ಚಿನ ವಾರ್ಷಿಕ ಮಹೋತ್ಸವ ಹಾಗೂ ತೆನೆ ಹಬ್ಬದ ಸಂದರ್ಭದಲ್ಲಿ ಸಮಿತಿಯ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಡುವುದರ ಮೂಲಕ ಸಹಕಾರ ನೀಡುತ್ತಿದ್ದಾರೆ ಎಂದರು.
ತೊಟ್ಟಂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ಸಂತ ಅನ್ನಮ್ಮ ಕಾನ್ವೆಂಟಿನ ಸಿಸ್ಟರ್ ಸುಷ್ಮಾ, ಸಿಸ್ಟರ್ ಶಾಲಿನಿ, ಸಿಸ್ಟರ್ ಲೂಸಿ, ಅಂತರ್ ಧಮೀರ್ಯ ಸಂವಾದ ಆಯೋಗದ ಸಂಚಾಲಕ ಆಗ್ನೆಲ್ ಫೆರ್ನಾಂಡಿಸ್, ಪದಾಧಿಕಾರಿ ಓನಿಲ್ ಡಿಸೋಜಾ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್ ಕೆ. ಸಾಲಿಯಾನ್, ಕಾರ್ಯಾಧ್ಯಕ್ಷ ಯತಿರಾಜ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಯೋಗಿಶ್ ಕುಮಾರ್, ಕೋಶಾಧಿಕಾರಿ ರಮೇಶ್ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.