ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರು ಪಟ್ಟಣದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಕೋಣಂದೂರಿನಲ್ಲಿ ನವೆಂಬರ್ 29ರಂದು ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ಮಕ್ಕಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಜಿ ಎಸ್ ನಾರಾಯಣರಾವ್ ಅವರು ಕಾಲೇಜು ಎಂದರೆ ಕೇವಲ ಪಾಠಪುಸ್ತಕಗಳ ಜಗತ್ತು ಮಾತ್ರವಲ್ಲ,ವ್ಯಕ್ತಿತ್ವ ಮಾರ್ಪಾಡು, ಜ್ಞಾನ ವಿಸ್ತರಣೆ, ಮೌಲ್ಯಗಳ ಅರಿವು ಮತ್ತು ಭವಿಷ್ಯದ ಬುನಾದಿ ನಿರ್ಮಾಣವಾಗುವ ಪವಿತ್ರ ಸ್ಥಳ. ಈ ಕಾಲೇಜು ನಮ್ಮ ವಿದ್ಯಾರ್ಥಿಗಳ ಬೆಳವಣಿಗೆಗೆ ಆದ್ಯತೆ ನೀಡುತ್ತಾ, ಅವರಲ್ಲಿ ಕೌಶಲ್ಯ, ಪ್ರತಿಭೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.
ಈ ವರ್ಷದ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತಮ್ಮ ಒಳಗಿರುವ ಸಾಮರ್ಥ್ಯವನ್ನು ಹೊರಬಿಡಲು ಅವಕಾಶ ನೀಡಿದ್ದು ನಮಗೆ ಹೆಮ್ಮೆ. ವಿವಿಧ ಸ್ಪರ್ಧೆಗಳು, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ಚಟುವಟಿಕೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮೂಹಿಕ ನಾಯಕತ್ವ, ಸಮಯ ನಿರ್ವಹಣೆ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶರಾವತಿ ಪ್ರಥಮ ದರ್ಜೆ ಕಾಲೇಜ ಪ್ರಾಂಶುಪಾಲರಾದ ಆರಡಿ ಮಲ್ಲಯ್ಯ ರವರು.ಹಾಗೂ ಸ್ಥಳೀಯ ಸಲಹಾ ಸಮಿತಿಯ ಸದಸ್ಯರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಹಾಂತೇಶ ಗೌಡ ಅವರು ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

