ಮೂಡುಬಿದಿರೆ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ ಕೋಟಿ-ಚೆನ್ನಯ 23ನೇ ವರ್ಷದ ಹೊನಲು ಬೆಳಕಿನ ಬಯಲು ಕಂಬಳೋತ್ಸವ ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿ ಜನವರಿ 31ರಂದು ಪೂರ್ವಾಹ್ನ ಗಂಟೆ 7.00ರಿಂದ ನಡೆಯಲಿದೆ.
ಕಡಲಕೆರೆ ಸೃಷ್ಟಿ ಗಾರ್ಡನ್ ನಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಹಾಗೂ ಕೋಶಾಧಿಕಾರಿ ಭಾಸ್ಕರ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಕಂಬಳ ಸಮಿತಿ ಪ್ರಮುಖರಾದ ರಂಜಿತ್ ಪೂಜಾರಿ ತೋಡಾರು, ಸುರೇಶ್ ಕೆ. ಪೂಜಾರಿ, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಯವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಅಂದು ಪೂರ್ವಾಹ್ನ ಮೂಡುಬಿದಿರೆ ಚೌಟರ ಅರಮನೆ ಕುಲದೀಪ ಎಂ. ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಂಬಳೋತ್ಸವವನ್ನು ಅಲಂಗಾರು ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇ|ಮೂ| ಈಶ್ವರ ಭಟ್, ಅಲಂಗಾರು ಚರ್ಚ್‌ನ ಧರ್ಮಗುರು ವಂ| ಫಾ| ಮೆಲ್ವಿನ್ ನೊರೊನ್ಹಾ, ಪುತ್ತಿಗೆ ನೂರಾನಿ ಮಸ್ಜಿದ್‌ನ ಮೌಲಾನಾ ಝೀಯಾವುಲ್ಲಾ ಹಕ್, ಕುಂಟಾಡಿ ಸುಧೀರ್ ಹೆಗ್ಡೆಯವರು ಉದ್ಘಾಟಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸಭಾ ವೇದಿಕೆಯನ್ನು ಉದ್ಘಾಟಿಸಲಿದ್ದು, ಆಧ್ಯಾತ್ಮಿಕ ಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮೀಜಿ ದೀಪ ಪ್ರಜ್ವಲನೆಗೈಯಲಿದ್ದಾರೆ. ರಾಣಿ ಅಬ್ಬಕ್ಕ ದೇವಿಯ ಕುರಿತು ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ. ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್‌ಕೋಟೆಯವರಿಗೆ ಗೌರವ ಸನ್ಮಾನ ನಡೆಯಲಿದೆ.
ಅಂದು ಸಾಯಂಕಾಲ 5.೦೦ ಗಂಟೆಗೆ ಫೆಬಿಯನ್ ಕೊಲಾಸೋ ವೇದಿಕೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಆಂಧ್ರ ಪ್ರದೇಶ ಘನತೆವೆತ್ತ ರಾಜ್ಯಪಾಲರು ಹಾಗೂ ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು ನ್ಯಾ.ಮೂ. ಅಬ್ದುಲ್ ನಝೀರ್ ನೆರವೇರಿಸಲಿದ್ದಾರೆ. ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ, ದ.ಕ. ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್ ಗೌರವ ಉಪಸ್ಥಿತಿ ಹೊಂದಲಿದ್ದಾರೆ.
ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಶೇಷ ಗೌರವ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಮತ್ತು ನಟ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ಭಾಗವಹಿಸಲಿದ್ದಾರೆ.

