ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿ ಸಾಂಪ್ರದಾಯಿಕ ಧಾನ್ಯ ಮುಹೂರ್ತ

0
58

ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಸಾಂಪ್ರದಾಯಿಕ ಧಾನ್ಯ ಮುಹೂರ್ತ ಇಂದು ಜರುಗಿತು. ಉಡುಪಿಯ ಕೃಷ್ಣದೇವರನ್ನು ಅನ್ನ ಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ಕೃಷ್ಣದೇವರಿಗೆ ಪ್ರತಿ ದಿನ ಶೋಢಶೋಪಚಾರ ಪೂಜೆಯೊಂದಿಗೆ ಹತ್ತಾರು ಬಗೆಯ ಖಾದ್ಯಗಳ ನೈವೇದ್ಯ ನಡೆದರೆ, ಮತ್ತೊಂದೆಡೆ ಭಕ್ತರಿಗೆ ದೇವರ ನೈವೇದ್ಯ ಅನ್ನಪ್ರಸಾದದ ರೂಪದಲ್ಲಿ ವಿತರಣೆಯಾಗುತ್ತದೆ. ಇಲ್ಲಿ ನಡೆಯುವ ಅನ್ನದಾಸೋಹದಲ್ಲಿ ಲಕ್ಷಾಂತರ ಜನ ಪ್ರಸಾದ ಸ್ವೀಕರಿಸುತ್ತಾರೆ. ಹಾಗಾಗಿ ಕೃಷ್ಣನ ಪೂಜೆಯನ್ನು ಅನ್ನ ಬ್ರಹ್ಮನ ಪೂಜೆಯೆಂದು ಕರೆಯಲಾಗುತ್ತದೆ. ಜನವರಿ 18ರಂದು ನಡೆಯಲಿರುವ ಶಿರೂರು ಮಠದ ಪರ್ಯಾಯಕ್ಕೆ ಧಾನ್ಯ ಸಂಗ್ರಹಿಸುವ ಮುಹೂರ್ತ ಇಂದು ನಡೆಯಿತು. ಈ ಮೊದಲು ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಗಳು ನಡೆದಿದ್ದವು. ಎಲ್ಲಾ ಮುಹೂರ್ತಗಳ ಉದ್ದೇಶ, ಎರಡು ವರ್ಷಗಳ ಕಾಲ ಭಕ್ತರ ಉಟೊಪಚಾರಕ್ಕೆ ಸಿದ್ಧತೆ ನಡೆಸುವುದೇ ಆಗಿದೆ.
ಧಾನ್ಯ ಮುಹೂರ್ತದ ಪ್ರಯುಕ್ತ, ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಕೃಷ್ಣದೇವರು ಅನಂತೇಶ್ವರ, ಚಂದ್ರಮೌಳೇಶ್ವರ ದೇವರ ದರ್ಶನದ ಬಳಿಕ, ನೂರಾರು ಭಕ್ತರು ತಲೆಯಲ್ಲಿ ಅಕ್ಕಿಯ ಮುಡಿಯನ್ನು ಹೊತ್ತು ನಡೆದರು. ಧಾನ್ಯವನ್ನು ಸಂಗ್ರಹಿಸುವ ಪ್ರತಿರೂಪದಂತೆ, ಈ ಅಕ್ಕಿ ಮುಡಿಯ ಮೆರವಣಿಗೆ ಅಷ್ಟಮಠಗಳ ರಥಬೀದಿಯಲ್ಲಿ ಜರುಗಿತು. ವಾದ್ಯ ಮೇಳಗಳೊಂದಿಗೆ ಸಾಗಿದ ಈ ಮೆರವಣಿಗೆ, ಕೃಷ್ಣ ಮಠ ಪ್ರವೇಶಿಸಿತು. ಕೃಷ್ಣದೇವರ ಆಡಳಿತ ಕಚೇರಿ ಇರುವ ಬಡಗು ಮಾಳಿಗೆಯಲ್ಲಿ, ಅಕ್ಕಿಯ ಮುಡಿಗಳನ್ನಿಟ್ಟು ಪೂಜಿಸಲಾಯಿತು.
ಕಟ್ಟಿಗೆಗಳನ್ನು ಸಾಂಪ್ರದಾಯಿಕವಾಗಿ ಜೋಡಿಸಿ ರಥ ನಿರ್ಮಿಸುವುದು ಉಡುಪಿಯ ಸಂಪ್ರದಾಯ. ಈ ರೀತಿ ನಿರ್ಮಿಸಲಾದ ಕಟ್ಟಿಗೆ ರಥಕ್ಕೆ ಇಂದು ಶಿಖರ ಪ್ರತಿಷ್ಠೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಮಠದ ದಿವಾನರಾದ ಡಾ ಉದಯ ಸರಳತ್ತಾಯ, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಎಂ ಬಿ ಪುರಾಣಿಕ್,ಪ್ರದೀಪ್ ಕುಮಾರ್ ಕಲ್ಕೂರ,ಇಂದ್ರಾಳಿ ಜಯಕರ್ ಶೆಟ್ಟಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಪರ್ಯಾಯ ಸಮಿತಿ ಮಟ್ಟಾರ್ ರತ್ನಾಕರ್ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಮೋಹನ್ ಭಟ್, ನಂದನ್ ಜೈನ್, ಮಧುಕರ್ ಮುದ್ರಾಡಿ, ವಿಷ್ಣು ಪ್ರಸಾದ್ ಪಾಡೀಗಾರ್, ಮತ್ತು ಅಧಿಕ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here