ತುಳುವರ್ಲ್ಡ್ ಫೌಂಡೇಶನ್ ಕಟೀಲ್ ಹಾಗೂ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಹಯೋಗದಲ್ಲಿ, ಕಟೀಲಿನಲ್ಲಿ ತುಳು ಡಿಜಿಟಲ್ ಲೈಬ್ರರಿ ಸ್ಥಾಪಿಸುವ ಮಹತ್ವದ ಯೋಜನೆ ರೂಪುಗೊಳ್ಳುತ್ತಿದೆ. ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಶಿಫಾರಸ್ಸಿನ ಮೇರೆಗೆ ಈ ಯೋಜನೆಗೆ ಅಗತ್ಯ ಬೆಂಬಲ ದೊರಕಿದ್ದು, ಅದರ ಭಾಗವಾಗಿ HPCL ಸಂಸ್ಥೆಯ ಸಿ.ಎಸ್.ಆರ್ ಪ್ರತಿನಿಧಿ ವೆಂಕಟೇಶ್ ಚಿಂತಾಕಿಂದಿ ಅವರು ಸ್ಥಳ ಪರಿಶೀಲನೆಗಾಗಿ ಕಟೀಲಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ, ತುಳುವರ್ಲ್ಡ್ ಫೌಂಡೇಶನ್‌ನ ಪದಾಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಿ, ಡಿಜಿಟಲ್ ಲೈಬ್ರರಿಯ ಮೂಲಸೌಕರ್ಯ, ಸ್ಥಳಾವಕಾಶ, ವಿದ್ಯುತ್ ಮತ್ತು ಇಂಟರ್ನೆಟ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಜನತೆಗೆ ಆಗುವ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ತುಳುನಾಡಿನ ಜ್ಞಾನಸಂಪತ್ತಿಗೆ ಪ್ರವೇಶ ಕಲ್ಪಿಸುವ ಉದ್ದೇಶದಿಂದ ಈ ಡಿಜಿಟಲ್ ಲೈಬ್ರರಿ ಸ್ಥಾಪನೆಗೆ ಮುಂದಾಗಲಾಗಿದ್ದು, ಇದು ತುಳುನಾಡಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.

