ಬದಿಯಡ್ಕ: ತುಳು ಭಾಷೆ, ಸಂಸ್ಕøತಿ, ಜನಪದಗಳ ಬಗ್ಗೆ ಆಳ ಅರಿವುಳ್ಳವರಾಗಿ, ನಶಿಸಿಹೋಗಿದ್ದ ಲಿಪಿಯನ್ನು ಮತ್ತೆ ಪ್ರವರ್ಧಮಾನಕ್ಕೆ ತಂದು ತುಳು ಲಿಪಿಬ್ರಹ್ಮರೆನಿಸಿದ ದಿ.ಪುಣಿಚಿತ್ತಾಯರ ಬದುಕು-ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಖ್ಯಾತ ಜನಪರ ವೈದ್ಯ, ತುಳು ಆಯನ ಕೂಟದ ಮಾಜಿ ಕಾರ್ಯದರ್ಶಿ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ತುಳುವೆರೆ ಆಯನೊ ಕೂಟ ಬದಿಯಡ್ಕ ಇದರ ವತಿಯಿಂದ ಬದಿಯಡ್ಕದ ಶ್ರೀನಿಧಿ ಔಷಧಾಲಯದಲ್ಲಿ ಶುಕ್ರವಾರ ಸಂಜೆ ನಡೆದ ತುಳು ಲಿಪಿಬ್ರಹ್ಮ ದಿ.ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಹುಟ್ಟುಹಬ್ಬದ ನೆನಪು ಕಾರ್ಯಕ್ರಮದಲ್ಲಿ ಪುಣಿಚಿತ್ತಾಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಇಲ್ಲಿಯ ಮಣ್ಣಿನ ಮೂಲದ ಬೆನ್ನುಹತ್ತಿ ಅದರಲ್ಲಡಗಿದ ಸತ್ವವನ್ನು ಹೊರಗೆಳೆದು ಪರಂಪರೆಯ ಶ್ರೀಮಂತಿಕೆಗೆ ಕಳಶವಿಟ್ಟವರು ದಿ.ಪುಣಿಚಿತ್ತಾಯರು. ಲೇಖನ, ಕಥೆ, ನಾಟಕ, ಯಕ್ಷಗಾನ ಪ್ರಸಂಗ, ಅನುವಾದ, ಅಧ್ಯಯನ, ಅಧ್ಯಾಪನಗಳಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡ ಅವರ ಜೀವನಾದರ್ಶಗಳು ನಮಗೆ ಪ್ರೇರಣೆಯಾಗಿದೆ ಎಂದವರು ನೆನಪಿಸಿದರು.

ತುಳುವೆರೆ ಆಯನೊ ಕೂಟದ ಜಗನ್ನಾಥ ರೈ ಕೊರೆಕ್ಕಾನ, ದಿ.ಪುಣಿಚಿತ್ತಾಯರ ಪುತ್ರ ವಿಜಯರಾಜ ಪುಣಿಚಿತ್ತಾಯ, ಜೈ ತುಳುನಾಡ್ ಕಾಸರಗೋಡು ಸಮಿತಿ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು, ಉತ್ತಮ ಕಾಸರಗೋಡು, ದೀಕ್ಷಿತ್ ಬದಿಯಡ್ಕ, ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು,ರಾಘವೇಂದ್ರ ಕಾಮತ್ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಈ ಸಂದರ್ಭ ಆಫರೇಷನ್ ಸಿಂದೂರದಲ್ಲಿ ಭಾಗವಹಿಸಿದ್ದ ಭಾರತೀಯ ಸೇನೆಯ ಯುವ ಸೇನಾನಿ ಅಕ್ಷಯ ಕುಮಾರ್ ಕಾಡಮನೆ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ತುಳುವೆರೆ ಆಯನೊ ಕೂಟದ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.