ಹೆಬ್ರಿ: ತುಳುವ ಭಾಷೆ, ಸಂಸ್ಕೃತಿ ಹಾಗೂ ಸಮುದಾಯದ ಹಕ್ಕುಗಳ ಸಂರಕ್ಷಣೆಯ ಉದ್ದೇಶದಿಂದ 1928ರಲ್ಲಿ ಸ್ಥಾಪಿತವಾದ ತುಳುವ ಮಹಾಸಭೆ, ತನ್ನ ಹೆಬ್ರಿ ತಾಲೂಕು ಘಟಕದ ನವ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ, ಹೆಸರಾಂತ ದಂತವೈದ್ಯರು ಮತ್ತು ಸಮಾಜಸೇವಕರಾದ ಡಾ. ಶರತ್ ಕುಮಾರ್ ಶೆಟ್ಟಿಯವರನ್ನು ಹೆಬ್ರಿ ತಾಲೂಕು ಸಂಚಾಲಕರಾಗಿ ನೇಮಕ ಮಾಡಿದೆ.
ಡಾ. ಶರತ್ ಕುಮಾರ್ ಶೆಟ್ಟಿ, ಪ್ರಸ್ತುತ ಸುಳ್ಯದ ಕೆ.ವಿ.ಜಿ ದಂತ ಕಾಲೇಜಿನಲ್ಲಿ ಪ್ರೊಫೆಸರ್, ವಿಭಾಗಾಧ್ಯಕ್ಷ ಮತ್ತು ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಒರ್ಥೋಡಾಂಟಿಕ್ಸ್ ಕ್ಷೇತ್ರದ ನುರಿತ ತಜ್ಞರಾಗಿದ್ದು, ವೈಜ್ಞಾನಿಕ ಮತ್ತು ಸಾಮಾಜಿಕ ಕಕ್ಷೆಯಲ್ಲಿ ಸುದೀರ್ಘ ಸೇವೆಯನ್ನು ನೀಡುತ್ತಿದ್ದಾರೆ.
ಅವರು ಇಂಡಿಯನ್ ಡೆಂಟಲ್ ಅಸೋಸಿಯೇಶನ್ – ಸುಳ್ಯ ಶಾಖೆಯ ಅಧ್ಯಕ್ಷ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಲೆಗಿಯನ್ ನಿರ್ದೇಶಕ, ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ಮಂಗಳೂರಿನ ಆರೋಗ್ಯ ಶಿಬಿರ ಸಂಯೋಜಕ, ಮತ್ತು ಭಾರತೀಯ ಮಾನವ ಹಕ್ಕುಗಳ ಸಂಘದ ಮಾಜಿ ಅಧ್ಯಕ್ಷರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಅವರ ನಿಸ್ವಾರ್ಥ ಸೇವೆ ಹಾಗೂ ತುಳು ಪರಂಪರೆಗೆ ನಿಷ್ಠೆಯು ಅವರನ್ನು ಈ ಪ್ರಮುಖ ಹೊಣೆಗಾರಿಕೆಗೆ ಅರ್ಹರಾಗಿಸಿದೆ ಎಂದು ತುಳುವ ಮಹಾಸಭೆಯ ಕೇಂದ್ರ ಸಮಿತಿ ತಿಳಿಸಿದ್ದಾರೆ.
ತುಳುವ ಮಹಾಸಭೆ, ಇಂದು ನವೋತ್ಸಾಹದೊಂದಿಗೆ ಪುನಶ್ಚೇತನಗೊಳ್ಳುತ್ತಿದ್ದು, ತುಳುನಾಡನ್ ಕಳರಿ ತರಬೇತಿ (ಸಮರಕಲೆ, ಮರ್ಮ ಚಿಕಿತ್ಸೆ), ನಶಿಸುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಾಲಯ ಪುನರ್ ಸ್ಥಾಪನೆ, ಭಾಷಾ–ಜಾತಿ–ಮತ ಸೌಹಾರ್ದತೆ, ಪರಿಸರ ಸಂರಕ್ಷಣೆಯಂತಹ ಹಲವಾರು ಕ್ಷೇತ್ರಗಳಲ್ಲಿ ಶ್ರಮಿಸುತ್ತಿದೆ. ಪ್ರತಿ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ದೇಶ-ವಿದೇಶಗಳಲ್ಲಿ ಕಾರ್ಯವಿಸ್ತರಣೆ ಮಾಡುತ್ತಿದೆ.
ಡಾ. ಶರತ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಹೆಬ್ರಿ ತಾಲೂಕಿನಲ್ಲಿಯೂ ತುಳು ಭಾಷಾ ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆ ಹಾಗೂ ಸಮುದಾಯದ ಸಂಘಟಿತ ಬಲವರ್ಧನೆಗೆ ನಿರೀಕ್ಷಿತ ಮುಂದುಗಡೆಯಾಗಲಿದೆ ಎಂಬ ವಿಶ್ವಾಸವನ್ನು ಮಹಾಸಭೆ ವ್ಯಕ್ತಪಡಿಸಿದೆ.
ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ತುಳುವ ಸಂಘಟನೆಗಳು ಅವರಿಗೆ ಅಭಿನಂದನೆ ಸಲ್ಲಿಸಿದೆ.