ತುಳು ಅಧಿಕೃತ ಭಾಷೆ : ಆಂಧ್ರ ಪ್ರದೇಶಕ್ಕೆ ಅಧ್ಯಯನ ತಂಡ: ಸರಕಾರದ ಆದೇಶ

0
10

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಆಂಧ್ರಪ್ರದೇಶ ರಾಜ್ಯಕ್ಕೆ ತೆರಳಿ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಸಹಿತ 5 ಮಂದಿಯ ತಂಡವನ್ನು  ಎರಡನೇ ಭಾಷೆಯನ್ನು ಅಧಿಕೃತ ಭಾಷೆ ಎಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಅಧ್ಯಯನ ಮಾಡುವ ಸಲುವಾಗಿ ರಚನೆ ಮಾಡಲಾಗಿದೆ.

ಆಂಧ್ರ ಪ್ರದೇಶಕ್ಕೆ ಅಧ್ಯಯನ ನಡೆಸಲು  ನಿಯೋಜಿಸಿರುವ ಸಮಿತಿಯ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ  ಗಾಯಿತ್ರಿ ಕೆ.ಎಂ,ಐ.ಎ.ಎಸ್  ಅವರು ನಿಯೋಜಿತರಾಗಿದ್ದು, ಕಾನೂನು ಇಲಾಖೆಯ ಉಪಕಾರ್ಯದರ್ಶಿ ಶ್ರೀಮತಿ ವನಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ  ಶ್ರೀ ಮೂರ್ತಿ ಕೆ.ಎನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಹಾಗೂ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಸುಧಾಕರ ಶೆಟ್ಟಿ ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಈ ಹಿಂದೆ ಆಂಧ್ರಪ್ರದೇಶದಲ್ಲಿ ಅಲ್ಲಿನ ಇತರ ಭಾಷೆಯನ್ನು ಹೆಚ್ಚುವರಿ  ಅಧಿಕೃತ ಭಾಷೆಯಾಗಿ ಅಂಗೀಕಾರ ಮಾಡಿರುವ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಾಗಿತ್ತು.

ಇದೀಗ ಆಂಧ್ರಪ್ರದೇಶದಲ್ಲಿ ಎರಡನೇ ಭಾಷೆಯನ್ನು ಯಾವ ಸ್ವರೂಪ,  ಪ್ರಮಾಣದಲ್ಲಿ   ಅಧಿಕೃತ ಭಾಷೆ ಎಂದು ಜಾರಿಗೊಳಿಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸರಕಾರ ಈ ಸಮಿತಿಯನ್ನು ರಚಿಸಿ ಮೂರು ತಿಂಗಳೊಳಗೆ  ವರದಿ ನೀಡುವಂತೆ ಆದೇಶಿಸಿದೆ. 

LEAVE A REPLY

Please enter your comment!
Please enter your name here