ಕಟೀಲು : ತುಳುನಾಡ ಸಂಸ್ಕೃತಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಬದ್ಧವಾಗಿರುವ ತುಳುವರ್ಲ್ಡ್ ಫೌಂಡೇಶನ್ (ರಿ.) ಕಟೀಲು ತನ್ನ ಕಾರ್ಯತಂತ್ರಗಳನ್ನು ಮತ್ತಷ್ಟು ಬಲಗೊಳಿಸುವ ದೃಷ್ಟಿಯಿಂದ, ಸಂಘಟನೆಯ ಕಾರ್ಯನಿರ್ವಾಹಕ ಸಂಚಾಲಕರಾಗಿ ಜಿ.ಕೆ. ಹರಿಪ್ರಸಾದ ರೈ ಕಾರಮೊಗರು ಮತ್ತು ರಾಘವೇಂದ್ರ ಶೆಟ್ಟಿ ಆತ್ರಾಡಿ ಅವರ ನೇಮಕಾತಿಯನ್ನು ಘೋಷಿಸಿದೆ.
ಜಿ.ಕೆ. ಹರಿಪ್ರಸಾದ ರೈ ಕಾರಮೊಗರು, ಗುರುಪುರದ ಕಾರಮೊಗರು ಗುತ್ತು ಕುಟುಂಬದವರು. ಕೃಷಿಕ ಕುಟುಂಬದಿಂದ ಬಂದ ಇವರು ಬಿ.ಎ ಪದವಿ ಪಡೆದ ಬಳಿಕ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಕಿಲ್ಡ್ ಸೂಪರ್ ವೈಸರ್ ತರಬೇತಿಯನ್ನು, ಬಳಿಕ ಬಿಜಿಎಂ ಮಂಗಳೂರಿನಲ್ಲಿ ಆರ್ಟ್ ಅಂಡ್ ಕ್ರಾಫ್ಟ್ ತರಬೇತಿಯನ್ನು ಪಡೆದು ವೃತ್ತಿಪರ ಜೀವನ ಆರಂಭಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಅವರು ಗುರುಪುರ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಸರ್ವ ಪಿಯು ಕಾಲೇಜಿನ ಉಪಾಧ್ಯಕ್ಷ, ದ.ಕ. ಮತ್ತು ಉಡುಪಿ ಜಿಲ್ಲಾ ವಿದ್ಯಾರ್ಥಿ ಫೆಡರೇಶನ್ ಅಧ್ಯಕ್ಷರಾಗಿ ಹೋರಾಟದ ಮೂಲಕ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಹಿತಕ್ಕಾಗಿ ಕಾರ್ಯನಿರ್ವಹಿಸಿದ್ದಾರೆ.
ಸಮಾಜ ಸೇವೆಯಲ್ಲಿ ಅವರು ಸ್ಥಾಪಿಸಿದ “ಪ್ರಸಾದ್ ಅಧ್ಯಯನ ಸಮೂಹ ಮತ್ತು ಸೇವಾ ಸಂಸ್ಥೆ ಗುರುಪುರ ಇದರ ಮೂಲಕ 1000ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಟೈಲರಿಂಗ್ ಮತ್ತು ಎಂಬ್ರಾಯಿಡರಿ ಮುಂತಾದ ಅನೇಕ ವೃತ್ತಿಪರ ತರಬೇತಿ ನೀಡಿದ್ದು, ಹೆಚ್ಚಿನ ಮಹಿಳೆಯರು ಸ್ವ ಉದ್ಯೋಗ ಹೊಂದಿ ಬದುಕಿನಲ್ಲಿ ಸ್ವಾವಲಂಬಿಗಳಾಗಿದ್ದಾರೆ. ಬಂಟರ ಸಂಘ ಗುರುಪುರದ ಪ್ರಧಾನ ಕಾರ್ಯದರ್ಶಿಯಾಗಿ, ಬಂಟರ ಯಾನೆ ನಾಡವರ ಮಾತೃ ಸಂಘದ ಸಂಪರ್ಕ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ, ಯುವಕ ಸಂಘ ಗುರುಪುರದ ಅಧ್ಯಕ್ಷರಾಗಿ, ರೋಟ್ರಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷರಾಗಿ “ಅತ್ಯುತ್ತಮ ಅಧ್ಯಕ್ಷ” ಪ್ರಶಸ್ತಿ ಪಡೆದವರು. ಜೆಸಿಐ ಗುರುಪುರ ಕೈಕಂಬದ ಸ್ಥಾಪಕ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿಯ ಸ್ಥಾಪಕ ಅಧ್ಯಕ್ಷರಾಗಿ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಘಟಕದ ಅಧ್ಯಕ್ಷರಾಗಿ ರಾಷ್ಟ್ರಮಟ್ಟದಲ್ಲಿ 7 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಸಾಧನೆ ಇವರದಾಗಿದೆ. ಅಲ್ಲದೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಉಪಾಧ್ಯಕ್ಷ ರಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಹೆಸರನ್ನು ಪಸರಿಸಿಕೊಂಡ ವ್ಯಕ್ತಿ.
ರಾಘವೇಂದ್ರ ಶೆಟ್ಟಿ ಆತ್ರಾಡಿ, ದಿವಂಗತ ತಾರಾನಾಥ್ ಶೆಟ್ಟಿ ಮತ್ತು ಮಣಿಬೈಲ್ ಸುಶೀಲ ಶೆಟ್ಟಿಯವರ ಪುತ್ರ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಇವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಂಸ್ಥೆಯ ರಾಜ್ಯಾಧ್ಯಕ್ಷರಾಗಿದ್ದಾರೆ.
ಲಯನ್ಸ್ ಕ್ಲಬ್ ಮತ್ತು ಇತರ ಜನಪರ ಸಂಸ್ಥೆಗಳೊಂದಿಗೆ ಜೊತೆಗೂಡಿ ಇವರು ನಾನಾ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಜನಮನ ಗೆದ್ದಿದ್ದಾರೆ.
ತುಳುವರ್ಲ್ಡ್ ಫೌಂಡೇಶನ್ ಇದರ ತತ್ವ, ದಿಟ್ಟತೆ, ತ್ಯಾಗ ಮತ್ತು ತಂತ್ರದ ಸಂಕೇತವಾದ ಈ ನೇಮಕಾತಿಗಳು ಸಂಸ್ಥೆಯ ಭವಿಷ್ಯದ ಕಾರ್ಯಚಟುವಟಿಕೆಗಳಿಗೆ ನೂತನ ಚೈತನ್ಯವನ್ನು ಒದಗಿಸಲಿದೆ.