ಉಡುಪಿ ನಗರದಲ್ಲಿ ಆರ್ಟಿಫಿಶಲ್ ಇಂಟೆಲಿಜೆನ್ಸ್ ಟ್ರಾಫಿಕ್ ಸಿಸ್ಟಮ್ ಮೂಲಕ ದಂಡ ವಿಧಿಸುವ ಹಾಗೂ ವೇಗ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ. ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ನಗರದಲ್ಲಿ ಸಂಚಾರಕ್ಕೆ ಸಂಬಂಧಿಸಿ ಸಿಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಮೂರು ಪ್ರಾಜೆಕ್ಟ್ಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಎಐ ಟ್ರಾಫಿಕ್ ಮ್ಯಾನೆಜ್ಮೆಂಟ್ ಸಿಸ್ಟಮ್ ಯೋಜನೆಯಲ್ಲಿ ಏಳು ಜಂಕ್ಷನ್ಗಳಲ್ಲಿ 14 ಕ್ಯಾಮೆರಾಗಳನ್ನು ಆಳವಡಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ನಗರಸಭೆಯ 50 ಲಕ್ಷ ರೂ. ಅನುದಾನದಲ್ಲಿ 4 ಜಂಕ್ಷನ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡದ ನೋಟಿಸ್ ನೇರವಾಗಿ ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಆರಂಭಿಸಲಾಗುವುದು. ಟ್ರಾಫಿಕ್ ಪೊಲೀಸರು ನಿಂತು ದಂಡ ವಿಧಿಸುವ ಕ್ರಮ ನಿಧಾನಕ್ಕೆ ಕಡಿಮೆ ಮಾಡಲಾಗುವುದು ಎಂದು ಅವರು ಹೇಳಿದರು.
ಸ್ಪೀಡ್ ರ್ಯಾಡರ್ ಗನ್ ಅಳವಡಿಕೆ ,ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 6 ಸ್ಥಳಗಳಲ್ಲಿ ಸ್ಪೀಡ್ ರ್ಯಾಡರ್ ಗನ್ ಅಳವಡಿಸಲು ಅನುಮೋದನೆ ದೊರೆತಿದೆ. ಈ ಮೂಲಕ ಓವರ್ ಸ್ಪೀಡ್ನಲ್ಲಿ ಸಂಚರಿಸುವ ವಾಹನಗಳನ್ನು ಪತ್ತೆ ಹಚ್ಚಲಾಗುವುದು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಸಹಭಾಗಿತ್ವದಲ್ಲಿ ಸೇನಾದೃಷ್ಟಿ ಯೋಜನೆಯಲ್ಲಿ 200 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಿಸಲಾಗಿದ್ದು, ಈಗಾಗಲೇ 25 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

