ಉಡುಪಿ: ಕಲಾಪದ ವೇಳೆ ನ್ಯಾಯಾಧೀಶರನ್ನೇ ನಿಂದಿಸಿದ ವಕೀಲ ಮಹಮ್ಮದ್ ಇಕ್ಬಾಲ್!; ಬಂಧನಕ್ಕೆ ಆದೇಶಿಸುತ್ತಿದ್ದಂತೆ ತಪ್ಪೊಪ್ಪಿಗೆ!

0
38

ಉಡುಪಿ: ಮಲ್ಪೆ ಠಾಣಾ ವ್ಯಾಪ್ತಿಯ ಪ್ರಕರಣವೊಂದರ ವಿಚಾರಣೆ ವೇಳೆ ಆರೋಪಿ ಪರ ವಕೀಲ ಮಹಮ್ಮದ್ ಇಕ್ಬಾಲ್ ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಸಿಜೆಎಮ್ ಅವರಿಗೆ ನಿಂದಿಸಿದ್ದಾರೆ. ಈ ವೇಳೆ ವಕೀಲರನ್ನು ಬಂಧಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದು, ನಂತರ ವಕೀಲ ತಪ್ಪೊಪ್ಪಿಗೆ ಬರೆದುಕೊಟ್ಟು ಬಂಧನ ಭೀತಿಯಿಂದ ನಿರಾಳವಾದ ಘಟನೆ ಶುಕ್ರವಾರ ಮಧ್ಯಾಹ್ನದ ವಿಚಾರಣೆ ವೇಳೆ ನಡೆಯಿತು.

ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಮಾರಕಾಸ್ತ್ರದಿಂದ ಹೊಡೆದಾಡಿಕೊಂಡ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕರಿಗೆ ವಾದಿಸಲು, ಆರೋಪಿಯ ಪರ ವಕೀಲರು ಅಡ್ಡಿ ಪಡಿಸುತ್ತಿದ್ದರು. ಸರಕಾರಿ ವಕೀಲರಿಗೆ ವಾದಿಸಲು ಅಡ್ಡಿ ಪಡಿಸಬೇಡಿ ಎಂದು ನ್ಯಾಯಾಧೀಶರು ಮನವರಿಕೆ ಮಾಡಿದರೂ, ಅವರು ತಮ್ಮ ವರ್ತನೆಯನ್ನು ನಿಲ್ಲಿಸಿಲ್ಲ.

ನ್ಯಾಯಧೀಶರು ತಮ್ಮ ಸ್ಟೆನೋ ಅವರಿಗೆ ಸೂಚಿಸಿ, ವಕೀಲ ಮಹಮ್ಮದ್ ಇಕ್ಬಾಲ್ ಅವರ ಮಾತುಗಳನ್ನು ದಾಖಲಿಸಿದ್ದಾರೆ. ಇಷ್ಟಾದರೂ ವಕೀಲ ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳದೇ, ಉದ್ದೇಶಪೂರ್ವಕವಾಗಿ ಅಸಂಸದೀಯ ಪದಗಳು ಮತ್ತು ಸಂವಿಧಾನಬಾಹಿರ ಪದಗಳನ್ನು ಬಳಸಿ, ಜೋರಾಗಿ ಕಿರುಚಾಡಿ ನ್ಯಾಯಾಧೀಶರಿಗೆ ನಿಂದಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದರು. ಆಗ ನ್ಯಾಯಾಧೀಶರು ವಕೀಲರಿಗೆ, ತಮ್ಮ ಈ ಕೃತ್ಯವು ಐಪಿಸಿ ಕಲಂ 228 ಅಥವಾ ಬಿಎನ್‌ಎಸ್ ಕಲಂ 267 ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ತಿಳಿಸಿ, ಪೊಲೀಸರಿಗೆ ಬಂಧಿಸಲು ಸೂಚಿಸುತ್ತಾರೆ. ತಕ್ಷಣ ನಗರ ಠಾಣಾ ಪಿಎಸ್ಐ ಭರತೇಶ್ ಹಾಗು ಸಿಬ್ಬಂದಿ ನ್ಯಾಯಾಲಯಕ್ಕೆ ಆಗಮಿಸಿ, ವಕೀಲ ಮಹಮ್ಮದ್ ಇಕ್ಬಾಲ್ ಅವರನ್ನು ಸುತ್ತುವರಿಯುತ್ತಾರೆ. ಆಗ ವಕೀಲ ಮಹಮ್ಮದ್ ಇಕ್ಬಾಲ್ ತಪ್ಪೊಪ್ಪಿಗೆ ಬರೆದುಕೊಟ್ಟು, ಬಂಧನದ ಭೀತಿಯಿಂದ ಪಾರಾದರು.

ಈ ಘಟನೆಯ ಬಳಿಕ ತಮ್ಮ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲದೇ ಇದ್ದಲ್ಲಿ ಪ್ರಕರಣವನ್ನು ಇತರೆ ನ್ಯಾಯಾಲಯಕ್ಕೆ ವರ್ಗಾಯಿಸಿಕೊಳ್ಳಲು ನ್ಯಾಯಧೀಶರು ವಕೀಲರಿಗೆ ತಿಳಿಸಿದರು. ಆಗ ವಕೀಲ, ತನಗೆ ಈ ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ಇನ್ನು ಮುಂದಕ್ಕೆ ನ್ಯಾಯಾಲಯಕ್ಕೆ ನಿಂದಿಸುವುದಿಲ್ಲ ಎಂದರು. ಅದರಂತೆ ವಕೀಲರ ಮಾತುಗಳನ್ನು ನ್ಯಾಯಾಲಯವು ದಾಖಲಿಸಿಕೊಂಡಿತು.

LEAVE A REPLY

Please enter your comment!
Please enter your name here