ಉಡುಪಿ : ಎಲ್‌ಪಿಜಿ ಅಭಾವ ; ಪೆಟ್ರೋಲ್ ಮೊರೆ ಹೋದ ಆಟೋ ಚಾಲಕರು

0
36

ಜಿಲ್ಲೆಯಲ್ಲಿ ಎಲ್‌ಪಿಜಿ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿದ್ದು, ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಅನಿಲದ ಕೊರತೆಯಿಂದಾಗಿ ಸಾರಿಗೆ ಮತ್ತು ಕೇಟರಿಂಗ್ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಅನಿವಾರ್ಯವಾಗಿ ಪೆಟ್ರೋಲ್ ಹಾಗೂ ಸೌದೆಯಂತಹ ಪರ್ಯಾಯ ಮಾರ್ಗಗಳನ್ನು ಅವಲಂಬಿಸುವಂತಾಗಿದೆ.

ಎಲ್‌ಪಿಜಿ ಬಳಸುತ್ತಿದ್ದ ಆಟೋ ರಿಕ್ಷಾ ಚಾಲಕರು ಈ ಬಿಕ್ಕಟ್ಟಿನಿಂದಾಗಿ ಕಂಗೆಟ್ಟಿದ್ದಾರೆ. ಈ ಹಿಂದೆ ಕಿನ್ನಿಮೂಲ್ಕಿ, ಬನ್ನಂಜೆ ಮತ್ತು ಬಾರ್ಕೂರು ನಿಲ್ದಾಣಗಳಲ್ಲಿ ಪ್ರತಿ ಕೆ.ಜಿ.ಗೆ 62 ರೂ. ದರದಲ್ಲಿ ಸಿಗುತ್ತಿದ್ದ ಗ್ಯಾಸ್ ಬೆಲೆ, ಈಗ ಅಭಾವದ ಹಿನ್ನೆಲೆಯಲ್ಲಿ ಬರೋಬ್ಬರಿ 120 ರೂ. ಗೆ ಏರಿಕೆಯಾಗಿದೆ.

ಅತಿಯಾದ ಬೆಲೆ ಏರಿಕೆಯಿಂದಾಗಿ ಆದಾಯವಿಲ್ಲದೆ ಅನೇಕ ಚಾಲಕರು ಮತ್ತೆ ಪೆಟ್ರೋಲ್ ಬಳಸುತ್ತಿದ್ದರೆ, ಇನ್ನು ಕೆಲವರು ಗ್ಯಾಸ್ ಲಭ್ಯವಾಗುವವರೆಗೆ ಆಟೋಗಳನ್ನು ಮನೆಯಲ್ಲೇ ನಿಲ್ಲಿಸಿ ಬೇರೆ ಕೆಲಸಗಳಿಗೆ ತೆರಳುತ್ತಿದ್ದಾರೆ.

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳು ಸಿಗದೆ ಹೋಟೆಲ್, ರೆಸ್ಟೋರೆಂಟ್ ಮತ್ತು ಸಣ್ಣ ಕ್ಯಾಂಟೀನ್‌ಗಳು ಪರದಾಡುತ್ತಿವೆ. ಪೂರೈಕೆ ವ್ಯವಸ್ಥೆ ವ್ಯತ್ಯಯವಾಗಿರುವುದರಿಂದ, ಉದ್ಯಮಿಗಳು ಅನಿವಾರ್ಯವಾಗಿ ಕಾಳಸಂತೆಯಲ್ಲಿ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ನೀಡಿ ಸಿಲಿಂಡರ್ ಖರೀದಿಸುತ್ತಿದ್ದಾರೆ.

ಅಡುಗೆ ಮಾಡಲು ಸಣ್ಣ ಹೋಟೆಲ್‌ಗಳು ಮತ್ತೆ ಸೌದೆ ಒಲೆ, ಸೀಮೆಎಣ್ಣೆ ಸ್ಟೌವ್ ಮತ್ತು ಏರ್-ಬ್ಲೋವರ್ ಸಿಸ್ಟಮ್‌ಗಳ ಮೊರೆ ಹೋಗಿವೆ. ಶಾಖವನ್ನು ಹೆಚ್ಚಿಸಲು ಬಳಸುವ ಬ್ಲೋವರ್ ಒಲೆಗಳಿಗೆ ಭಾರಿ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ಇವುಗಳ ಅಭಾವ ಉಂಟಾಗಿದೆ. ಬೆಂಗಳೂರು ಮತ್ತು ಬೆಳಗಾವಿಯಿಂದ ಬರುವ ಈ ಒಲೆಗಳ ಆರ್ಡರ್ ಪಡೆಯಲು 25 ರಿಂದ 40 ದಿನಗಳ ಕಾಯುವಿಕೆ ಅನಿವಾರ್ಯವಾಗಿದೆ. ಇವುಗಳ ಬೆಲೆ ತೆರಿಗೆ ಸೇರಿ 38,000 ರೂ. ನಿಂದ 45,000 ರೂ. ವರೆಗೆ ಇದೆ.

ಯುದ್ಧದ ಪರಿಣಾಮ ಉಡುಪಿಯ ಮಾರುಕಟ್ಟೆಗೆ ತಟ್ಟಿದೆ. ಒಂದು ವೇಳೆ ಯುದ್ಧ ಹೀಗೆಯೇ ಮುಂದುವರಿದರೆ, ಸ್ಥಳೀಯ ಆರ್ಥಿಕತೆಯ ಇತರ ವಲಯಗಳ ಮೇಲೂ ಇದರ ದುಷ್ಪರಿಣಾಮ ಬೀರಲಿದೆ ಎಂಬ ಭೀತಿ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here