ಮುದ್ರಾಡಿ, ಸಾಣೂರು, ಮಡಾಮಕ್ಕಿ ವಂಡೈ ಹಕ್ಕಾಡಿ ಪಂಚಾಯತ್ ಆಯ್ಕೆ
ಮುದ್ರಾಡಿ ಪಂಚಾಯತ್‌ಗೆ 1 ಕೋಟಿ ರೂ. ನಗದು ಬಹುಮಾನ
ಉಡುಪಿ : ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯತ್‌ಗಳಿಗೆ “ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ” ನೀಡಲಾಗುತ್ತಿದ್ದು, ಈ ಬಾರಿ ಉಡುಪಿ ಜಿಲ್ಲೆಯ 5 ಗ್ರಾಮ ಪಂಚಾಯತ್‌ಗಳು ಪ್ರಶಸ್ತಿಗೆ ಭಾಜನವಾಗಿದೆ.
17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDG) ಆಧಾರವನ್ನಾಗಿಟ್ಟುಕೊಂಡು 9 ಸುಸ್ಥಿರ ಅಭಿವೃದ್ಧಿ ಗುರಿಗಳ ಸ್ಥಳೀಕರಣ (LSDGS) ವಿಷಯಗಳಿಗೆ ಹೊಂದುವಂತೆ ಪಂಚಾಯತ್‌ಗಳನ್ನು ಸ್ಪರ್ಧಾತ್ಮಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 2022ರಿಂದ ಈ ಪ್ರಶಸ್ತಿಗಳನ್ನು ಕೊಡಮಾಡುತ್ತಿದೆ.

ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ, ಆರೋಗ್ಯಕರೆ, ಮಕ್ಕಳ ಸ್ನೇಹಿ, ಜಲಸಮೃದ್ಯ ಸ್ವಚ್ಛಮತ್ತು ಹಸಿರು ಪಂಚಾಯತ್, ಸ್ವಾವಲಂಬಿ ಮೂಲಸೌಕರ್ಯ ಹೊಂದಿರುವ ಪಂಚಾಯತ್, ಸಾಮಾಜಿಕ ನ್ಯಾಯ ಮತ್ತು ಭದ್ರತೆ ಹೊಂದಿರುವ ಪಂಚಾಯತ್, ಉತ್ತಮ ಆಡಳಿತ ಹೊಂದಿರುವ ಪಂಚಾಯತ್, ಮಹಿಳಾ ಸ್ನೇಹಿ ಪಂಚಾಯತ್ ವಿಚಾರವಾಗಿ ಪಂಚಾಯತ್‌ಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದ್ದು ಉಡುಪಿ ಜಿಲ್ಲೆಯ 5 ಗ್ರಾಮ ಪಂಚಾಯತ್ ಗಳು ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ಪಂಚಾಯತ್ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದು 1 ಕೋಟಿ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಪಡೆಯಲಿದೆ. ಕುಂದಾಪುರ ತಾಲೂಕಿನ ವಂತ್ಸೆ ಗ್ರಾಮ ಪಂಚಾಯತ್ ಆರೋಗ್ಯಕರ ಗ್ರಾಮ ಪಂಚಾಯತ್ ವಿಷಯದಡಿ ಹಾಗೂ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ ಜಲಸಮೃದ್ಧ ಪಂಚಾಯತ್ ವಿಷಯದಡಿ 2ನೇ ಸ್ಥಾನ ಪಡೆದು ತಲಾ 75 ಲಕ್ಷ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಪಡೆಯಲಿವೆ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್ ಸ್ವಾವಲಂಬಿ ಮೂಲ ಸೌಕರ್ಯ ಹೊಂದಿರುವ ಪಂಚಾಯತ್ ವಿಷಯದಡಿ ಮತ್ತು ಕುಂದಾಪುರ ತಾಲೂಕಿನ ಹಕ್ಕಾಡಿ ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಮತ್ತು ಭದ್ರತೆ ಹೊಂದಿರುವ ಪಂಚಾಯತ್ ವಿಷಯದಡಿ ತೃತೀಯ ಸ್ಥಾನವನ್ನು ಪಡೆದು ತಲಾ 50 ಲಕ್ಷ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಪಡೆಯಲಿವೆ. ಪ್ರಶಸ್ತಿಗೆ ಆಯ್ಕೆಯಾದ ಪಂಚಾಯತ್‌ಗಳಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

