ಉಡುಪಿ : ವೈದ್ಯ ರತ್ನ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ ಪೂಜಾರಿ ಕೆರೆಬೆಟ್ಟು ಇವರನ್ನು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು, ವಿಖ್ಯಾತ್ ಪೆರ್ಡೂರು, ಸುನಂದ ರಘುರಾಮ ಸುವರ್ಣ ಹೊಸಂಗಡಿ ಅವರು ಸೆ. 5ರಂದು ಭೇಟಿ ಮಾಡಿ ಕುಶಲೋಪಚಾರ ವಿಚಾರಿಸಿದರು.
ತುಳು ನಾಡಿನಲ್ಲಿರುವ ನಾಟಿ ವೈದ್ಯಕೀಯ ಪದ್ಧತಿಗೆ ಸರಕಾರ ಮಟ್ಟದಲ್ಲಿ ಮನ್ನಣೆ ಸಿಗಬೇಕು, ನಾಟಿ ವೈದ್ಯವು ಮಾತಿನಲ್ಲಿ ಬೆಳೆಯದೆ ಬರವಣಿಗೆ ರೂಪದಲ್ಲಿ ಕ್ರೋಡಿಕೃತವಾಗಬೇಕು. ಉಡುಪಿ ತುಳುವ ಮಹಾಸಭೆಯು ತುಳುನಾಡಿನ ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ, ನಾನು ಮೂಲತಃ ಓರ್ವ ತುಳುವನಾಗಿ ಉಡುಪಿ ತುಳುವ ಮಹಾಸಭಾದ ಪ್ರತಿ ಕಾರ್ಯಗಳಿಗೂ ಜೊತೆಯಾಗಿರುತ್ತೇನೆ ಎಂದು ಭಾಸ್ಕರ ಪೂಜಾರಿ ಕೆರೆಬೆಟ್ಟು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಕಳ ತಾಲೂಕಿನ ನಕ್ರೆಯಲ್ಲಿ ಬೊಮ್ಮರ ಬೆಟ್ಟು ಗರಡಿಮನೆಯ ಪ್ರಸಿದ್ಧ ನಾಟಿ ವೈದ್ಯರಾದ ದಿ| ಬೊಳ್ಳು ಪೂಜಾರಿ ಹಾಗೂ ಕಲ್ಯಾಣಿಯವರ ಪುತ್ರರಾಗಿ 01/01/1957 ರಲ್ಲಿ ಜನಿಸಿದ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಲ್ಲಿ ಹಾಗೂ ಹಿರಿಯಡ್ಕದಲ್ಲಿ ಪೂರೈಸಿ, ತದನಂತರ ಉಡುಪಿಯ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ನೆರವೇರಿಸಿ, ದೈವ-ದೇವರ ಅನುಗ್ರಹದಿಂದ, ತಂದೆಯ ಆಶೀರ್ವಾದದಿಂದ ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದು ಭಾರತದ ಜನಪದ ಔಷಧೀಯ ಪರಂಪರೆಯನ್ನು ಪ್ರಪಂಚದಲ್ಲೇ ಹೆಚ್ಚು ಶ್ರೀಮಂತವಾಗಿಸಲು ಹಲವಾರು ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 150ಕ್ಕೂ ಮಿಕ್ಕಿ ಗಿಡಮೂಲಿಗಳ ಪ್ರಾತ್ಯಕ್ಷಿಕೆ ಹಾಗೂ ಅದರ ಔಷಧೀಯ ಗುಣಗಳ ಮಹತ್ವದ ಬಗ್ಗೆ ಕುತೂಹಲಿಗಳ ಸಂಶಯಗಳಿಗೆ ಸೂಕ್ತವಾದ ಪರಿಹಾರವನ್ನು ನೀಡಿದ್ದಾರೆ.
ಶೃಂಗೇರಿ, ಬಾಳೆಹೊನ್ನೂರು, ತುಮಕೂರು, ಚಿತ್ರದುರ್ಗ, ಸುಬ್ರಮಣ್ಯ, ಬೀದರ್, ಆದಿಚುಂಚನಗಿರಿಯ ಮಹಾಮಠಗಳಲ್ಲಿ ನೆರವೇರಿದ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ಭಾಗವಹಿಸಿ ಇನ್ನಷ್ಟು ಜ್ಞಾನ ಸಂಪನ್ನರಾಗಿ, ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಂತ ವಿವಿಧ ಬಗೆಯ ಔಷಧೀಯ ಸಸ್ಯರಾಶಿಗಳನ್ನು ಉಪಯೋಗಿಸಿ ಸಾವಿರಾರು ಮಂದಿಗೆ ಶುಶ್ರೂಷೆಗೈದು ಅವರಿಗೆ ಹೊಸ ಬಾಳನ್ನು ನೀಡಿದ್ದಾರೆ.
ಇವರು ತಮ್ಮ ಪರಿಸರದ ಮಠ, ದೇವಸ್ಥಾನಗಳ ಮುಖ್ಯಸ್ಥರಾಗಿ, ಗರಡಿಯ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ, 2 ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ರೈತರ ಸೇವಾ ಸಹಕಾರಿ ಸಂಘ ಹಾಗೂ ಹಿರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಹುದ್ದೆಯೊಂದಿಗೆ ಹತ್ತು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
45 ವರ್ಷಗಳ ಕಾಲ ನಾಟಿ ವೈದ್ಯಕೀಯ ಪದ್ಧತಿಯನ್ನು ವೃತ್ತಿಯನ್ನಾಗಿಸಿಕೊಂಡು ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಚಿಕಿತ್ಸೆ ನೀಡಿ ಮಾನವೀಯ ಧರ್ಮವನ್ನು ಮೆರೆದ ಇವರು ಸಾಮಾಜಿಕ, ಧಾರ್ಮಿಕ, ರಾಜಕೀಯ, ಕೃಷಿ, ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಇವರಿಗೆ ಪ್ರಮುಖವಾಗಿ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ (ರಿ.) ಬೆಂಗಳೂರು ಇವರು ಕೊಡಲ್ಪಡುವ “ಕರ್ನಾಟಕ ಪಾರಂಪರಿಕ ವೈದ್ಯರತ್ನ ಪ್ರಶಸ್ತಿ-2025″, ,”ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ- 2013” ಉಡುಪಿ ಸಿರಿ ತುಳು ಚಾವಡಿಯ “ವೈದ್ಯ ಸಿರಿ” ಪ್ರಶಸ್ತಿ, “ಶ್ರೀಕೃಷ್ಣಾನುಗ್ರಹ” ಪ್ರಶಸ್ತಿ,”ನಾಟಿ ವೈದ್ಯರತ್ನ” ಪ್ರಶಸ್ತಿ ಹೀಗೆ ಹತ್ತು ಹಲವಾರು ಸನ್ಮಾನಗಳು,ಪ್ರಶಸ್ತಿಗಳು ಇವರ ಮುಡಿಗೇರಿದೆ.
ಸೌಮ್ಯ ಸ್ವಭಾವದ, ಕ್ರಿಯಾಶೀಲ ವ್ಯಕ್ತಿತ್ವದ ಇವರು ಧರ್ಮಪತ್ನಿ ಪ್ರೇಮಾ, ಪುತ್ರ ಶಿವರಾಜ್ ಮಗಳು ರೇಷ್ಮಾ ಹಾಗೂ ಅಳಿಯ ಪ್ರಸಾದ್ ರೊಂದಿಗಿನ ಸಂತೃಪ್ತ ಸುಖೀ ಕುಟುಂಬದ ಸಾರಥಿಯಾಗಿ ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ.
ಬರಹ-ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು.

