“ಕಲಾ ಸಿರಿ” ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಸುಧಾಕರ ಶೆಟ್ಟಿ ತಂಗಾಣ ಬಜೆ ಇವರನ್ನು ಉಡುಪಿ ತಾಲೂಕು ತುಳುವ ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು ಹಾಗೂ ಸದಸ್ಯರಾದ ವೈದ್ಯ ಭಾಸ್ಕರ ಪೂಜಾರಿ ಹಿರಿಯಡ್ಕ, ರಘುರಾಮ್ ಸುವರ್ಣ ಹೊಸಂಗಡಿ ಹಾಗು ಕೃಷ್ಣ ಪೂಜಾರಿ ತಂಗಾಣರವರು ಭೇಟಿ ನೀಡಿ ಕುಶಲೋಪಚಾರ ವಿಚಾರಿಸಿದರು.
ತುಳುನಾಡಿನ ದೈವಾರಾಧನೆಯಲ್ಲಿ ಆಡಂಬರಕ್ಕೆ ಅವಕಾಶ ಕೊಡದೆ ಹಿರಿಯರ ಮಾರ್ಗದರ್ಶನದಂತೆ ಹಿಂದಿನ ಕಟ್ಟುಪಾಡುಗಳು ಮುಂದುವರೆದರೆ ಪ್ರಕೃತಿ ಆರಾಧನೆಯೊಂದಿಗೆ ಸಂಸ್ಕೃತಿ ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ಉಳಿಯುತ್ತದೆ ಮತ್ತು ತುಳುನಾಡಿನ ಮಕ್ಕಳಾದ ನಾವು ನಮ್ಮ ತಾಯಿ ಭಾಷೆಗಾಗಿ ತನ್ನ ಸಂಪೂರ್ಣ ಸಹಕಾರವನ್ನು ತುಳುವ ಮಹಾಸಭಾಕ್ಕೆ ನೀಡುವೆನೆಂದು ಭರವಸೆ ನೀಡಿದರು.
ಸುಧಾಕರ್ ಶೆಟ್ಟಿ ತಂಗಾಣ, ಬಜೆ
ಬದುಕು-ಜ್ಞಾನ
ಉಡುಪಿ ಜಿಲ್ಲೆಯ ಬಜೆ ತಂಗಾಣದ ಕೀರ್ತಿಶೇಷ ಶ್ರೀಮತಿ ಅಕ್ಕಮ್ಮ ಶೆಟ್ಟಿ ಮತ್ತು ಶ್ರೀ ಶೀನಪ್ಪ ಶೆಟ್ಟಿ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದ ತಾವು ಹುಟ್ಟೂರಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪೂರೈಸಿ ತಂದೆ-ತಾಯಿಯ ಜೊತೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವಿರಿ. ಪ್ರಗತಿಪರ ಕೃಷಿಕರಾಗಿ ಹೈನುಗಾರಿಕೆಯಲ್ಲಿ ಯಶಸ್ಸನ್ನು ಕಂಡಿರುವ ತಾವು ಕುಕ್ಕೆಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ರೈತ ಸಂಘ ಪೆರ್ಡೂರು ವಲಯದ ಅಧ್ಯಕ್ಷರಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲೂ ಕೈಯಾಡಿಸಿ ಗ್ರಾಮ ಪಂಚಾಯಾತ್ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸಾಧಕ.
ಕರಾವಳಿಯ ಗಂಡುಕಲೆಯ ಮೇಲೆ ಅಪಾರ ಒಲವು ಇದ್ದ ತಾವು ಯಕ್ಷಗಾನವನ್ನು ನೋಡುತ್ತಾ ಅದರಿಂದ ಪ್ರಭಾವಿತರಾಗಿ ಹಗಲು ಸಾಮಾನ್ಯರಂತೆ ಬದುಕಿ ರಾತ್ರಿ ಯಕ್ಷರಾಗಿ ಯಕ್ಷಲೋಕದಲ್ಲಿ ಸಂಚರಿಸುತ್ತಾ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಕಲಾ ಸರಸ್ವತಿಯ ಪುತ್ರರಾಗಿ, ಖ್ಯಾತ ವೇಷಧಾರಿಯಾಗಿ, ಪ್ರಬುದ್ಧ ಅರ್ಥಧಾರಿಯಾಗಿ, ಉತ್ತಮ ಮಾತುಗಾರನಾಗಿ ಮೆರೆಯುವಂತಾದಿರಿ.
ತುಳುನಾಡಿನ ದೈವರಾಧನೆಯಲ್ಲಿಯೂ ಯಶಸ್ವೀ ಹೆಜ್ಜೆಯನ್ನಿರಿಸಿದ ತಾವು ದೈವ ಮತ್ತು ಮಾನವನಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಮಧ್ಯಸ್ಥ, ಮದಿಪುದಾರನಾಗಿ ವಿವಿಧೆಡೆ ಫಲಾಪೇಕ್ಷೆ ಇಲ್ಲದೆ ನಿರಂತರವಾಗಿ ೨೫ ವರ್ಷಗಳ ಸೇವೆಸಲ್ಲಿಸಿಕೊಂಡು ಬಂದಿರುತ್ತೀರಿ. ನಿಮ್ಮ ಅನನ್ಯ ಸೇವೆಯನ್ನು ಮನಗಂಡು “ಕಲಾ ಸಿರಿ” ಪ್ರಶಸ್ತಿ, “ತುಳುವ ಮಂದಾರ” ಪ್ರಶಸ್ತಿ ಇಂತಹ ಹಲವಾರು ಪ್ರಶಸ್ತಿಗಳು ತಮ್ಮ ಮುಡಿಗೇರವೆ.
ಪ್ರಸ್ತುತ ತಂಗಾಣ ವರ್ತೆ ಕಲ್ಕುಡ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಾ ಧರ್ಮಪತ್ನಿ ಶ್ರೀಮತಿ ಸವಿತಾ ಶೆಟ್ಟಿ ಮಕ್ಕಳು ಸ್ವಸ್ತಿಕ, ಸ್ವಾತಿಕ ಈ ಸುಂದರ ಸುಖೀ-ಸಂಸಾರದ ಸಾರಥಿಯಾಗಿರುವ ತಾವು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯರಾಗಿರುವಿರಿ.
✍️ ಸೌಮ್ಯ ರಾಣಿ ವಿಶ್ವನಾಥ್ ಪೆರ್ಡೂರು

